ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಅಧ್ಯಕ್ಷ ಜೋ ಬಿಡನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಟೀ ಶರ್ಟ್ ಅನ್ನು ಉಡುಗೊರೆಯಾಗಿ ನೀಡಿದರು. ಭಾರತ ಮತ್ತು ಅಮೆರಿಕ ಕೃತಕ ಬುದ್ಧಿಮತ್ತೆಯಲ್ಲಿ(AI) ಪ್ರಗತಿ ಸಾಧಿಸಿವೆ ಎಂಬ ಉಲ್ಲೇಖವಿರುವ ಟೀ ಶರ್ಟ್ ಅನ್ನು ಮೋದಿ ಸ್ವೀಕರಿಸಿದರು.
ಕೃತಕ ಬುದ್ಧಿಮತ್ತೆಯಲ್ಲಿ ಅಮೆರಿಕ-ಭಾರತವೇ ಭವಿಷ್ಯ! ನಮ್ಮ ಎರಡೂ ದೇಶಗಳು ಬಲಿಷ್ಠವಾಗಿವೆ ಮತ್ತು ನಾವು ಒಟ್ಟಾಗಿ ಕೆಲಸ ಮಾಡಿದಾಗ ನಮ್ಮ ಸ್ಥಾನ ಉತ್ತಮವಾಗಿರುತ್ತದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಫೆಡೆಕ್ಸ್, ಮಾಸ್ಟರ್ ಕಾರ್ಡ್ ಮತ್ತು ಅಡೋಬ್ ಸೇರಿದಂತೆ ಉನ್ನತ ಕಂಪನಿಗಳ ಸಿಇಒಗಳನ್ನು ಭೇಟಿ ಮಾಡಿದರು. ಪ್ರಧಾನಿಯವರು ಕೈಗಾರಿಕೋದ್ಯಮಿಗಳೊಂದಿಗೆ ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ತಾಂತ್ರಿಕ ಕ್ಷೇತ್ರಗಳಲ್ಲಿ ನಾವೀನ್ಯತೆ, ಹೂಡಿಕೆ ಮತ್ತು ಉತ್ಪಾದನೆಯ ಕುರಿತು ಚರ್ಚಿಸಿದರು. ನಂತರ, ಯುಎಸ್ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರ ಅಧಿಕೃತ ಭೋಜನಕೂಟದಲ್ಲಿ ಭಾಗವಹಿಸಿದರು.
ಅಮೆರಿಕ ಭೇಟಿಯ 3ನೇ ದಿನದಂದು ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಯುಎಸ್ ಕಾಂಗ್ರೆಸ್ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಉಕ್ರೇನ್ ಯುದ್ಧ, ಭಯೋತ್ಪಾದನೆ, ಇಂಡೋ-ಪೆಸಿಫಿಕ್ ವಲಯದ ಸ್ಥಿರತೆ, ಭಾರತ-ಅಮೆರಿಕ ಸಂಬಂಧಗಳ ಕುರಿತು ಚರ್ಚಿಸಲಾಯಿತು. ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಈಜಿಪ್ಟ್‌ಗೆ ತೆರಳುವ ಮುನ್ನ ವಾಷಿಂಗ್ಟನ್ ಡಿಸಿಯ ರೊನಾಲ್ಡ್ ರೇಗನ್ ಬಿಲ್ಡಿಂಗ್ ಆ್ಯಂಡ್ ಇಂಟರ್‌ನ್ಯಾಶನಲ್ ಟ್ರೇಡ್ ಸೆಂಟರ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.