ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೊನಾ ನೆಗಟಿವ್ ವರದಿ ಬೆನ್ನಲ್ಲೇ ಜಿ-20ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಭಾರತಕ್ಕೆ ಬರುವುದಾಗಿ ಶ್ವೇತಭವನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಅಮೆರಿಕ ಅಧ್ಯಕ್ಷರು ನಾಳೆ (ಅಕ್ಟೋಬರ್ 7)ರಂದು ದೆಹಲಿ ತಲುಪಲಿದ್ದಾರೆ. ಜೋ ಬಿಡೆನ್ ಅವರ ಪತ್ನಿ ಕೊರೊನಾ ಪಾಸಿಟವ್ ಬಂದಿದ್ದರಿಂದ ಜಿ20 ಸಭೆಗಳಲ್ಲಿ ಬಿಡೆನ್ ಭಾಗವಹಿಸುವ ಬಗ್ಗೆ ಅನುಮಾನವಿತ್ತು. ಈಗ ಶ್ವೇತಭವನ ಗೊಂದಲಗಳಿಗೆ ತೆರೆ ಎಳೆದಿದ್ದು, ಯುಎಸ್ ಅಧ್ಯಕ್ಷರ ಭಾರತ ಭೇಟಿ ಪಕ್ಕಾ ಎಂದರು.
ಇದೇ ತಿಂಗಳ 9 ಮತ್ತು 10ರಂದು ದೆಹಲಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಪಾಲ್ಗೊಳ್ಳಲಿದ್ದಾರೆ. ಈ ಪ್ರವಾಸದ ಭಾಗವಾಗಿ, ಬಿಡೆನ್ ಸಂಪೂರ್ಣವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ ಎಂದು ಶ್ವೇತ ಭವನ ತಿಳಿಸಿದೆ. ಅಮೆರಿಕ ಅಧ್ಯಕ್ಷ ಜೋ ಬಿಡನ್ ಗುರುವಾರ ದೆಹಲಿಗೆ ಆಗಮಿಸಲಿದ್ದು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಎರಡು ದಿನಗಳ ಕಾಲ ಜಿ20 ಸಭೆಗಳಲ್ಲಿ ಉಪಸ್ಥಿತಿ ಇರುತ್ತಾರೆ.
ಜಾಗತಿಕ ಆರ್ಥಿಕ ಸವಾಲುಗಳ ಕುರಿತು ಚರ್ಚಿಸಲು ಜಿ-20 ಶೃಂಗಸಭೆಗೆ ಎಲ್ಲವೂ ಸಿದ್ಧವಾಗಿದೆ. ಜಿ20 ಶೃಂಗಸಭೆ ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯ ಪ್ರಗತಿ ಮೈದಾನ ಭಾರತ ಮಂಟಪದಲ್ಲಿ ನಡೆಯಲಿದೆ. ಜಿ20 ಶೃಂಗಸಭೆಗೆ ವಿಶ್ವದ ರಾಷ್ಟ್ರಗಳ ಮುಖ್ಯಸ್ಥರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಬಿಗಿ ಭದ್ರತೆ ಏರ್ಪಡಿಸಿದೆ. ಈ ಸಮ್ಮೇಳನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್‌ನ ಪ್ರಧಾನ ಮಂತ್ರಿಗಳು ಮತ್ತು ಅಧ್ಯಕ್ಷರು ಮತ್ತು ಅನೇಕ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.