ಅಮೆರಿಕ ಅಧ್ಯಕ್ಷೀಯ ಚುನಾವಣೆ: ಬಾಹ್ಯಾಕಾಶದಿಂದಲೇ ಮತ ಚಲಾಯಿಸಲು ಸುನೀತಾ ವಿಲಿಯಮ್ಸ್,ಬುಚ್ ವಿಲ್ಮೋರ್ ಸಜ್ಜು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಮೆರಿಕದ ಅಧ್ಯಕ್ಷೀಯ ಚುನಾವಣಾ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ದಿಢೀರ್​ ಹಿಂದೆ ಸರಿದ ಬೆನ್ನಲ್ಲೇ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಭಾರತೀಯ ಮೂಲದ ಕಮಲಾ ಹ್ಯಾರಿಸ್ ಕಣಕ್ಕಿಳಿದರೆ, ಅತ್ತ ಪ್ರತಿಸ್ಪರ್ಧಿಯಾಗಿ ಡೆಮಾಕ್ರಟಿಕ್ ಪಕ್ಷದಿಂದ ಡೊನಾಲ್ಡ್ ಟ್ರಂಪ್​ ಅಖಾಡಕ್ಕಿಳಿದಿದ್ದಾರೆ.

ಒಂದೆಡೆ ಕಮಲಾಗೆ ಅಮೆರಿಕಾದ ಹೆಸರಾಂತ ಸೆಲೆಬ್ರಿಟಿಗಳಿಂದ ವ್ಯಾಪಕ ಬೆಂಬಲ ಲಭಿಸಿದರೆ, ಭವಿಷ್ಯವಾಣಿಗಳು ಟ್ರಂಪ್​ ಗೆಲುವಿನ ಮುನ್ಸೂಚನೆ ಕೊಡುತ್ತಿವೆ. ಈ ಎಲ್ಲಾ ಲೆಕ್ಕಾಚಾರಗಳ ಮಧ್ಯೆ ಇದೀಗ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್​ ಸ್ಪೇಸ್​ನಿಂದಲೇ ಮತ ಚಲಾಯಿಸಲು ಮುಂದಾಗಿದ್ದಾರೆ.

ಇಂದು ಯುಎಸ್​ ಅಧ್ಯಕ್ಷೀಯ ಚುನಾವಣೆಯು ಪ್ರಾರಂಭವಾಗುತ್ತಿದ್ದಂತೆ, ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಕಳೆದುಕೊಳ್ಳಲು ಇಚ್ಛಿಸದ ವಿಶೇಷ ಮತದಾರರು, ಬಾಹ್ಯಾಕಾಶದಿಂದಲೇ ಅಭ್ಯರ್ಥಿಗಳಿಗೆ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ.

ಸುನೀತಾ ಮತ್ತು ಬುಚ್, ಭೂಮಿಯಿಂದ ನೂರಾರು ಮೈಲಿಗಳಷ್ಟು ಎತ್ತರದಲ್ಲಿ ನೆಲೆಸಿದ್ದು, ಭೂಮಿಗೆ ಬರಲು ಸಾಧ್ಯವಾಗದ ಸ್ಥಿತಿ ತಲುಪಿದ್ದಾರೆ. ಇದಕ್ಕೆ ಅಮೆರಿಕಾ ಕೂಡ ಕಳವಳ ವ್ಯಕ್ತಪಡಿಸಿದ್ದು, ಶೀಘ್ರವೇ ಇಬ್ಬರನ್ನು ಭೂಮಿಗೆ ಕರೆತರುವ ತಯಾರಿಗಳನ್ನು ಮಾಡುತ್ತಿದೆ. ಈ ಮಧ್ಯೆ ಇಬ್ಬರು ದಿಗ್ಗಜರು ತಾವು ಮತದಾನದಲ್ಲಿ ಭಾಗವಹಿಸುವುದಾಗಿ ಸಂದೇಶ ರವಾನಿಸಿದ್ದಾರೆ.

ಬೋಯಿಂಗ್ ಸ್ಟಾರ್‌ಲೈನರ್​ನಲ್ಲಿ ಸಿಲುಕಿರುವ ವಿಲಿಯಮ್ಸ್ ಮತ್ತು ವಿಲ್ಮೋರ್, ಪ್ರಸ್ತುತ ಬಾಹ್ಯಾಕಾಶ ನಿಲ್ದಾಣದಲ್ಲಿನ ಸುರಕ್ಷತಾ ಪ್ರೋಟೋಕಾಲ್‌ಗಳ ಕಾರಣದಿಂದಾಗಿ ಜೂನ್ 2024ರಿಂದ ಅಲ್ಲಿಯೇ ಉಳಿದುಕೊಳ್ಳುವಂತ ಪರಿಸ್ಥಿತಿ ಎದುರಾಗಿದ್ದು, ಕನಿಷ್ಟ ಫೆಬ್ರವರಿ 2025 ರವರೆಗೆ ಬಾಹ್ಯಾಕಾಶದಲ್ಲಿ ಇರುತ್ತಾರೆ ಎಂದು ವರದಿಗಳು ಉಲ್ಲೇಖಿಸಿವೆ. ಇತ್ತೀಚೆಗಷ್ಟೇ ವಿಶೇಷವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದ ಸುನೀತಾ, ಇದೀಗ ತಮ್ಮ ಮತ ಚಲಾಯಿಸುವ ಹಕ್ಕನ್ನು ಕಳೆದುಕೊಳ್ಳದಿರಲು ಇಚ್ಛಿಸಿದ್ದಾರೆ.

ಬಾಹ್ಯಾಕಾಶದಲ್ಲಿ ಮತ ಚಲಾಯಿಸುವ ಪ್ರಕ್ರಿಯೆ ಹೇಗೆ?
ನಾಸಾ ಗೈರುಹಾಜರಿ ಮತಪತ್ರಗಳಂತೆಯೇ ಮತದಾನ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದು ನಿಗದಿಪಡಿಸಿದ ಮತದಾನ ಕೇಂದ್ರಕ್ಕೆ ಹೋಗಲು ಸಾಧ್ಯವಾಗದ ಯಾರೊಬ್ಬರು ಮಾಡಿದ ಮತವಾಗಿರಲಿದೆ. ಟೆಕ್ಸಾಸ್‌ನ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಬಾಹ್ಯಾಕಾಶ ನಿಲ್ದಾಣ ಮತ್ತು ಮಿಷನ್ ಕಂಟ್ರೋಲ್ ಸೆಂಟರ್ ನಡುವೆ ಮತಗಳು 1.2 ಮಿಲಿಯನ್ ಮೈಲಿಗಳಷ್ಟು ದೂರ ಹರಡಲಿದೆ.

ಗಗನಯಾತ್ರಿಗಳು ಗೈರುಹಾಜರಿ ಮತಪತ್ರವನ್ನು ವಿನಂತಿಸಲು ಫೆಡರಲ್ ಪೋಸ್ಟ್ ಕಾರ್ಡ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡಲಿದ್ದಾರೆ ಮತ್ತು ಬಾಹ್ಯಾಕಾಶದಲ್ಲಿ ಎಲೆಕ್ಟ್ರಾನಿಕ್ ಮತಪತ್ರವನ್ನು ತುಂಬುತ್ತಾರೆ. ಈ ದಾಖಲಾತಿಯನ್ನು ನಂತರ ನಾಸಾದ ಟ್ರ್ಯಾಕಿಂಗ್ ಮತ್ತು ಡೇಟಾ ರಿಲೇ ಸ್ಯಾಟಲೈಟ್ ಸಿಸ್ಟಮ್ ಮೂಲಕ ನ್ಯೂ ಮೆಕ್ಸಿಕೋದಲ್ಲಿನ ಏಜೆನ್ಸಿಯ ಪರೀಕ್ಷಾ ಸೌಲಭ್ಯದಲ್ಲಿರುವ ಬೃಹತ್​ ಆಂಟೆನಾಗೆ ಕಳುಹಿಸಲಾಗುತ್ತದೆ

ಅಲ್ಲಿಂದ, ನಾಸಾ ಮತಪತ್ರವನ್ನು ಮಿಷನ್ ಕಂಟ್ರೋಲ್ ಸೆಂಟರ್‌ಗೆ ರವಾನಿಸುತ್ತದೆ. ಅದು ಮತವನ್ನು ಚಲಾಯಿಸುವ ಜವಾಬ್ದಾರಿಯುತ ಕೌಂಟಿ ಕ್ಲರ್ಕ್‌ಗೆ ವೋಟ್​ಗಳನ್ನು ವರ್ಗಾಯಿಸುತ್ತದೆ. ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು, ಮತಪತ್ರವನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ಇದು ಕೇವಲ ಗಗನಯಾತ್ರಿ ಮತ್ತು ಮತಪತ್ರವನ್ನು ಚಲಾಯಿಸುವ ಗುಮಾಸ್ತರಿಗೆ ಮಾತ್ರ ನೋಡುವ ಅವಕಾಶವಿರುತ್ತದೆ.

1997ರಲ್ಲಿ ಡೇವಿಡ್ ವುಲ್ಫ್ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಮತ ಚಲಾಯಿಸಿದ್ದರು. ನಾಸಾ ನೀಡಿರುವ ಮಾಹಿತಿ ಪ್ರಕಾರ, 2020ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಕೇಟ್ ರೂಬಿನ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮತ ಚಲಾಯಿಸಿದ ಕೊನೆಯ ಗಗನಯಾತ್ರಿಯಾಗಿದ್ದರು ಎಂದು ಹೇಳಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!