Friday, January 9, 2026

ಅಮೆರಿಕಾದ ಉಪಾಧ್ಯಕ್ಷ ಜೆಡಿ ವಾನ್ಸ್ ಮನೆ ಮೇಲೆ ದಾಳಿ: ಕಿಟಕಿಯ ಗಾಜುಗಳು ಪುಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾದ ಉಪಾಧ್ಯಕ್ಷ ಜೆಡಿ ವಾನ್ಸ್ ಅವರ ಸಿನ್ಸಿನಾಟಿಯ ನಿವಾಸದ ಮೇಲೆ ದಾಳಿ ನಡೆದಿದೆ. ಈ ಘಟನೆಯಲ್ಲಿ ಕಿಟಕಿಗಳು ಪುಡಿಪುಡಿಯಾಗಿವೆ.

ಘಟನೆ ಬಳಿಕ ಓರ್ವ ಶಂಕಿತನನ್ನ ಬಂಧಿಸಿರುವ ಪೊಲೀಸರು (US Police) ತುರ್ತು ವಿಚಾರಣೆ ಆರಂಭಿಸಿದ್ದಾರೆ.

ವೆನೆಜುವೆಲಾ ಮೇಲೆ ಅಮೆರಿಕ ಇತ್ತೀಚೆಗಷ್ಟೇ ದಾಳಿ ನಡೆಸಿ ಆ ದೇಶದ ಅಧ್ಯಕ್ಷರನ್ನು ಬಂಧಿಸಿದೆ. ಅದರ ಬೆನ್ನಲ್ಲೇ ಅಮೆರಿಕ ಉಪಾಧ್ಯಕ್ಷರ ನಿವಾಸದ ಮೇಲೆ ನಡೆಸಲಾಗಿರುವ ದಾಳಿ ಹಲವಾರು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ, ತನಿಖೆ ನಡೆಸಿರುವ ಪೊಲೀಸರು ಇದು ವ್ಯಕ್ತಿಯೊಬ್ಬನ ಕೆಲಸ ಎಂದು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇನ್ನಿತರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವ ಮೂಲಕ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ವಶಕ್ಕೆ ಪಡೆಯಲಾಗಿರುವ ವ್ಯಕ್ತಿಯ ಬಗ್ಗೆ ಪೊಲೀಸರು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಘಟನೆ ನಡೆದಾಗ ವಾನ್ಸ್ ಕುಟುಂಬ ಮನೆಯಲ್ಲಿ ಇರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ದಾಳಿ ಮಾಡಿದ ವ್ಯಕ್ತಿ ಉಪಾಧ್ಯಕ್ಷರ ಮನೆಗೆ ಪ್ರವೇಶಿಸಿಲ್ಲ ಎಂದು CNN ವರದಿ ಮಾಡಿದೆ.

ಕಳೆದ ವಾರ, ವಾನ್ಸ್ ಅವರು ಅಮೆರಿಕಾದ ವೆನೆಜುವೆಲಾ ಕಾರ್ಯಾಚರಣೆಯನ್ನು ವೀಕ್ಷಿಸಲು ಟ್ರಂಪ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಮಾರ್ – ಎ- ಲೊಗೊಗೆ ಹೋಗಿರಲಿಲ್ಲ. ವಾನ್ಸ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಾಚರಣೆಯನ್ನು ಗಮನಿಸುತ್ತಿದ್ದರು. ಕಾರ್ಯಾಚರಣೆ ಮುಗಿದ ನಂತರ ಅವರು ಸಿನ್ಸಿನಾಟಿಗೆ ಮರಳಿದ್ದರು. ಆನಂತರ ಅವರು ತಮ್ಮ ಕುಟುಂಬದೊಂದಿಗೆ ವಿವಿಧ ರಾಜಕೀಯ ಪ್ರವಾಸಗಳಿಗೆ ತೆರಳಿದ್ದರು. ಹಾಗಾಗಿ, ವಾನ್ಸ್ ಮನೆ ಮೇಲೆ ದಾಳಿ ನಡೆದಾಗ ಅವರು ಅಲ್ಲಿರಲಿಲ್ಲ.

error: Content is protected !!