October 18, 2026
Sunday, October 18, 2026
spot_img

ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ‘ವರುಣ’ನ ವಿಘ್ನ: ಕೊಲಂಬೋದಲ್ಲಿ ಮಳೆ ಭೀತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಲೋಕದ ಅತ್ಯಂತ ರೋಚಕ ಕಾದಾಟವಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಈಗ ಮಳೆಯ ಆತಂಕ ಎದುರಾಗಿದೆ. ಶ್ರೀಲಂಕಾದ ಕೊಲಂಬೋದಲ್ಲಿ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಈ ಪಂದ್ಯ ನಿಗದಿಯಾಗಿದ್ದು, ಹವಾಮಾನ ಇಲಾಖೆಯ ವರದಿಗಳು ಕ್ರಿಕೆಟ್ ಪ್ರೇಮಿಗಳಲ್ಲಿ ತುಸು ಆತಂಕ ಮೂಡಿಸಿವೆ.

ಶ್ರೀಲಂಕಾ ಹವಾಮಾನ ಇಲಾಖೆಯ ಪ್ರಕಾರ, ಫೆಬ್ರವರಿ 15ರ ಸುಮಾರಿಗೆ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗುವ ಸಾಧ್ಯತೆಯಿದೆ. ಇದು ಪಂದ್ಯದ ಮೇಲೆ ಪ್ರಭಾವ ಬೀರಬಹುದು ಎನ್ನಲಾಗಿದೆ.

‘ಅಕ್ಯೂವೆದರ್’ ವರದಿ ಮಾಡಿರುವಂತೆ, ಪಂದ್ಯ ಆರಂಭವಾಗುವ ಎರಡು ಗಂಟೆಗಳ ಮೊದಲು ಅಂದರೆ ಸಂಜೆ 5 ಗಂಟೆಯ ಸುಮಾರಿಗೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ಪಂದ್ಯ ಆರಂಭವಾದ ನಂತರ ಮಳೆಯ ತೀವ್ರತೆ ಕಡಿಮೆಯಾಗಿ, ಆಟಕ್ಕೆ ಹೆಚ್ಚಿನ ತೊಂದರೆಯಾಗಲಿಕ್ಕಿಲ್ಲ ಎಂಬ ಆಶಾದಾಯಕ ಮುನ್ಸೂಚನೆಯನ್ನೂ ನೀಡಲಾಗಿದೆ.

ಈ ಪಂದ್ಯದ ಸುತ್ತ ಈಗಾಗಲೇ ಸಾಕಷ್ಟು ರಾಜಕೀಯ ಮತ್ತು ಕ್ರೀಡಾ ವಿವಾದಗಳು ನಡೆದಿವೆ. ಬಾಂಗ್ಲಾದೇಶದ ಪಂದ್ಯಗಳನ್ನು ಭಾರತಕ್ಕೆ ಸ್ಥಳಾಂತರಿಸದ ಹಿನ್ನೆಲೆಯಲ್ಲಿ, ಪಾಕಿಸ್ತಾನವು ಆರಂಭದಲ್ಲಿ ಭಾರತದ ವಿರುದ್ಧ ಆಡಲು ಹಿಂದೇಟು ಹಾಕಿತ್ತು. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ನಂತರ ಪಾಕ್ ತಂಡ ಪಂದ್ಯದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದೆ.

ಸದ್ಯ ಅಭಿಮಾನಿಗಳೆಲ್ಲರೂ “ವರುಣ ದೇವ” ಕೃಪೆ ತೋರಿ, ಪೂರ್ಣ ಪ್ರಮಾಣದ ಪಂದ್ಯ ನಡೆಯಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

Must Read