ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಲಾಸ್ಟಿಕ್ ಬಳಕೆಯಿಂದ ಎಷ್ಟೆಲ್ಲಾ ಹಾನಿಗಳಿವೆ ಎಂಬುದನ್ನು ನೀವು ಕೇಳಿರುತ್ತೀರಿ, ಓದಿಯೂ ಇರುತ್ತೀರಿ. ಮಣ್ಣಿನೊಂದಿಗೆ ಕರಗದ ಅತ್ಯಂತ ಅಪಾಯಕಾರಿ ವಸ್ತುವಾದ ಪ್ಲಾಸ್ಟಿಕ್ ಅನ್ನು ಬಳಕೆ ಮಾಡದಂತೆ ಈಗೊಂದು ದಶಕಗಳಿಂದಲೇ ಜಗತ್ತಿನಾದ್ಯಂತ ಜಾಗೃತಿ ಮೂಡಿಸುವುದು, ನಿಷೇಧ ಹೇರುವುದು ಇತ್ಯಾದಿಗಳನ್ನು ಮಾಡಲಾಗುತ್ತಿದೆ. ಆದರೂ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ನಿತ್ಯವೂ ಸಾವಿರಾರು ಕೆಜಿಗಳಷ್ಟು ಪ್ಲಾಸ್ಟಿಕ್ ಪರಿಸರವನ್ನು ಸೇರಿ ಮಲೀನಗೊಳಿಸುತ್ತಿದೆ. ವಿಜ್ಞಾನಿಗಳ ಪ್ರಕಾರ ಮುಂದಿನ 40-50 ವರ್ಷಗಳಲ್ಲಿ ಭೂಮಿಯಮೇಲೆ ಪ್ಲಾಸ್ಟಿಕ್ ಪದರವೇ ನಿರ್ಮಾಣವಾದರೆ ಅಚ್ಚರಿಯಿಲ್ಲ.
ಆದರೆ ಇಲ್ಲೊಂದು ನವೋದ್ದಿಮೆ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು ವಿನೂತನ ಮಾದರಿ ಸೃಷ್ಟಿಸಿದೆ. ಬಿದಿರು ಇತ್ಯಾದಿ ಸಸ್ಯಜನ್ಯ ಪದಾರ್ಥಗಳನ್ನು ಬಳಸಿ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಕರಗಬಲ್ಲ ವಸ್ತುವನ್ನು ತಯಾರಿಸಿದೆ. ಮುಂಬೈ, ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ಕೆಲ ಪ್ರಮುಖ ನಗರಗಳಲ್ಲಿ ಮೆಚ್ಚುಗೆಯನ್ನೂ ಗಳಿಸಿದೆ ಈ ನವೋದ್ದಿಮೆ. ಖಾಯಂ ಆಗಿ ಮುಂಬೈನ ಕರಾವಳಿ ಪ್ರದೇಶಗಳಲ್ಲಿ ಸ್ವಚ್ಛತಾಕಾರ್ಯ ಮಾಡುತ್ತಿದ್ದ ಮೂವರು ಯುವ ಮಿತ್ರರು ಸೇರಿಕೊಂಡು ಈ ʼಬೆಕೊʼ ಎಂಬ ಕಂಪನಿಯನ್ನು ಹುಟ್ಟುಹಾಕಿದ್ದಾರೆ. ಅವರು ಎಂದಿನಂತೆ ತೀರ ಪ್ರದೇಶದಲ್ಲಿ ಸ್ವಯಂ ಪ್ರೇರಿತವಾಗಿ ಕಸ ಆರಿಸುತ್ತಿರುವಾಗ ಅವರಿಗೆ ತಾವು ತಮ್ಮ ಬಾಲ್ಯದಲ್ಲಿ ತಿನ್ನುತ್ತಿದ್ದ ಈಗ ಲಭ್ಯವಿಲ್ಲದ ಚಾಕ್ಲೆಟ್ ಕಾಗದವೊಂದು ದೊರಕಿದೆ. ಇಪ್ಪತ್ತು ವರ್ಷ ಕಳೆದರೂ ಒಂಚೂರು ಮಾಸದ ಆ ಸಿಪ್ಪೆ ನೋಡಿ ಅದರಿಂದ ಪ್ಲಾಸ್ಟಿಕ್ ಗೆ ಪರ್ಯಾಯ ತರುವ ಕುರಿತು ಚಿಂತಿಸಿ ಮೂವರೂ ಗೆಳೆಯರು ಈ ಕಂಪನಿ ಹುಟ್ಟುಹಾಕಿದ್ದಾರೆ.
ಕಂಪನಿಯು 2018 ರಲ್ಲಿ ಪ್ರಾರಂಭವಾಗಿದ್ದು ಬಿದಿರು ಮುಂತಾದ ಸಸ್ಯಜನ್ಯ ಪದಾರ್ಥಗಳ ಮೂಲಕ ಮುಖವಸ್ತ್ರ, ಕರಗಬಲ್ಲ ಟಿಶ್ಯೂಗಳು ಮುಂತಾದ ಉತ್ಪನ್ನಗಳ ತಯಾರಿಸುತ್ತದೆ. ಏಕ-ಬಳಕೆಯ ಪ್ಲಾಸ್ಟಿಕ್ ಬದಲಿಗೆ ಜೋಳದ ಗಂಜಿ, ಬಿದಿರು, ಕಬ್ಬು, ತೆಂಗಿನಕಾಯಿ ಮತ್ತು ಇತರ ನೈಸರ್ಗಿಕ ಪರ್ಯಾಯಗಳನ್ನು ಬಳಸುತ್ತದೆ ಎಂದು ಸ್ಟಾರ್ಟಪ್ ಹೇಳಿಕೊಂಡಿದೆ. ಹೀಗೆ ಮೂವರು ಗೆಳೆಯರ ಪರಿಸರ ಸಂರಕ್ಷಣೆಯ ಸಂಕಲ್ಪವೊಂದು ದೊಡ್ಡ ಕಂಪನಿಯಾಗಿ ಮನೆಮಾತಾಗಿದೆ.