ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದ ಪ್ರಮುಖ ಜನಪ್ರಿಯ ಯೋಜನೆಗಳಾಗಿರುವ ಗ್ಯಾರೆಂಟಿಗಳಿಗಾಗಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಬಳಕೆಯಾಗಿದೆ ಎಂದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಸರ್ಕಾರಕ್ಕೆ ನೊಟೀಸ್ ನೀಡಿದೆ.
ರಾಷ್ಟ್ರೀಯ ಆಯೋಗ ಜಂಟಿ ಕಾರ್ಯದರ್ಶಿ ರಾಜೀವ್ ಕುಮಾರ್ ತಿವಾರಿ ರಾಜ್ಯ ಸರ್ಕಾರದ ಸಿಎಸ್ಗೆ ಪತ್ರ ಬರೆದಿದ್ದು, 7 ದಿನಗಳ ಒಳಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಕರ್ನಾಟಕ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕರ್ನಾಟಕ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಅಡಿಯಲ್ಲಿ ನಿಗದಿಪಡಿಸಿದ ಹಣವನ್ನು ಬಳಸಿಕೊಳ್ಳಲು ನಿರ್ಧರಿಸಿದೆ ಎಂಬ ಮಾಹಿತಿ ಇದೆ. ಕರ್ನಾಟಕ ಸರ್ಕಾರವು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಂಚಿಕೆಯಿಂದ ಗ್ಯಾರಂಟಿ ಯೋಜನೆಗಳಿಗೆ ಯೋಜನೆಗಳಿಗೆ 14,730.53 ಕೋಟಿ ರೂ ಬಳಸಿಕೊಳ್ಳಲು ತೀರ್ಮಾನ ತೆಗೆದುಕೊಂಡಿದೆ.
ರಾಜ್ಯಗಳಲ್ಲಿನ ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಶೇಷ ಘಟಕ ಯೋಜನೆ ಮತ್ತು ವಿಶೇಷ ಕೇಂದ್ರ ಸಹಾಯ ವೂ ಇದೆ. ಹಾಗಾಗಿ ಭಾರತ ಸಂವಿಧಾನದ 338 ನೇ ವಿಧಿಯ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಕಡ್ಡಾಯವಾಗಿ ಅನುಸರಿಸಲು ಆಯೋಗ ಬದ್ಧವಾಗಿದೆ. ದಯವಿಟ್ಟು ಈ ವಿಷಯದ ಬಗ್ಗೆ ವಿವರವಾದ ವರದಿಯನ್ನ 7 ದಿನಗಳೊಳಗೆ ಆಯೋಗಕ್ಕೆ ಒದಗಿಸಬೇಕೆಂದು ತಿಱಿಸಿದ್ದಾರೆ. ಅಲ್ಲದೆ, ಇದನ್ನು ಅತ್ಯಂತ ತುರ್ತು ಎಂದು ಪರಿಗಣಿಸಬೇಕೆಂದು ಆಯೋಗ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.
ಸಿಎಂ ಸಿದ್ದರಾಮಯ್ಯ ಸರ್ಕಾರದ ಪಂಚ ಯೋಜನೆಗಳಿಗೆ ಹಣ ಹೊಂದಿಸಲು ಕಸರತ್ತು ನಡೆಸಿದೆ. ಹೀಗಾಗಿ 2024-25ನೇ ಹಣಕಾಸು ವರ್ಷಕ್ಕಾಗಿ ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪಂಗಡದ ಉಪ ಯೋಜನೆಗೆ ಮೀಸಲಿಟ್ಟಿದ್ದ 39,171 ಕೋಟಿ ರೂ. ಅನುದಾನದಲ್ಲಿ 14,282 ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.