Friday, December 9, 2022

Latest Posts

ಉತ್ತರಾಖಂಡ್‌ ಹಿಮಪಾತ: ಹವಾಮಾನ ಸರಿಯಾಗುತ್ತಿದ್ದಂತೆ ಮತ್ತೆ ರಕ್ಷಣಾ ಕಾರ್ಯ ಪ್ರಾರಂಭ, ಇನ್ನೂ ಪತ್ತೆಯಾಗಿಲ್ಲ 27 ಮಂದಿಯ ಕುರುಹು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಉತ್ತರಕಾಶಿ ಜಿಲ್ಲೆಯ ದ್ರೌಪದಿ ಕಾ ದಂಡಾ ಶಿಖರದಲ್ಲಿ ಹಿಮಪಾತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಹಲವರನ್ನು ರಕ್ಷಿಸಲಾಗಿದ್ದು ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರಕ್ಷಣಾ ಕಾರ್ಯವನ್ನು ಸ್ಥಗಿತ ಗೊಳಿಸಲಾಗಿತ್ತು. ಇದೀಗ ವಾತಾವರಣ ಸರಿಯಾಗುತ್ತಿದ್ದಂತೆ ಮತ್ತೆ ರಕ್ಷಣಾ ಕಾರ್ಯವನ್ನು ಪುನರಾರಂಭಿಸಲಾಗಿದೆ. ನಾಪತ್ತೆಯಾಗಿದ್ದ ಪರ್ವತಾರೋಹಣ ತಂಡದ 15 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್‌ಐಎಂ) ಪರ್ವತಾರೋಹಿಗಳು ನಡೆಸುತ್ತಿವೆ.

ಹವಾಮಾನ ಪರಿಸ್ಥಿತಿ ಸುಧಾರಿಸಿರುವುದರಿಂದ ಉತ್ತರಕಾಶಿಯ ಮಟ್ಲಿ ಹೆಲಿಪ್ಯಾಡ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಂಡಿದೆ. ಐವರನ್ನು ಉತ್ತರಕಾಶಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸಣ್ಣಪುಟ್ಟ ಗಾಯಗಳಾಗಿರುವ ಹತ್ತು ಮಂದಿಯನ್ನು ಮನೆಗೆ ವಾಪಸ್ ಕಳುಹಿಸಲಾಗಿದೆ.

ಉತ್ತರಕಾಶಿ ಮೂಲದ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್‌ಐಎಂ) ಪರ್ವತಾರೋಹಿಗಳ ಗುಂಪು ಹಿಮಪಾತದಲ್ಲಿ ಸಿಲುಕಿತ್ತು. ಇನ್ನೂ 27 ಮಂದಿ ಪರ್ವತಾರೋಹಿಗಳು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇಬ್ಬರು ಬೋಧಕರು ಮತ್ತು ಪ್ರಶಿಕ್ಷಣಾರ್ಥಿಗಳು ಸೇರಿದಂತೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. 15 ದಿನಗಳ ಅವಧಿಯಲ್ಲಿ ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಮಕಾಲು ಏರುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಏಸ್ ಪರ್ವತಾರೋಹಿ ಸವಿತಾ ಕಾನ್ಸ್ವಾಲ್ ಉತ್ತರಕಾಶಿ ಜಿಲ್ಲೆಯ ದ್ರೌಪದಿ ಕಾ ದಂಡ-II ನಲ್ಲಿ ಹಿಮಪಾತದಲ್ಲಿ ಸಾವನ್ನಪ್ಪಿದವರಲ್ಲಿ ಸೇರಿದ್ದಾರೆ. ಮೃತರಲ್ಲಿ ಭುಕ್ಕಿ ಗ್ರಾಮದ ಮತ್ತೊಬ್ಬ ಬೋಧಕ ನೌಮಿ ರಾವತ್ ಕೂಡ ಸೇರಿದ್ದಾರೆ. ಇನ್ನೆರಡು ದೇಹಗಳು ಪ್ರಶಿಕ್ಷಣಾರ್ಥಿಗಳದ್ದಾಗಿದ್ದು ಅವರ ಗುರುತುಗಳನ್ನು ಬಹಿರಂಗಪಡಿಸಲಾಗಿಲ್ಲ.

ಮಂಗಳವಾರ ಹಿಮಕುಸಿತದಿಂದ 17,000 ಅಡಿ ಎತ್ತರದಲ್ಲಿರುವ ಪ್ರದೇಶವನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವೈಮಾನಿಕ ಪರಿಶೀಲನೆ ನಡೆಸಿದ್ದು ಮತ್ತು 27 ಪರ್ವತಾರೋಹಿಗಳು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!