ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಶಾಸ್ತ್ರತಾಳ್‌ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಚಾರಣಕ್ಕೆ ತೆರಳಿದ್ದ ರಾಜ್ಯದ ಐವರು ಚಾರಣಿಗರು ಮೃತಪಟ್ಟ ಸುದ್ದಿ ತಿಳಿದು ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಈಗಾಗಲೇ ರಕ್ಷಣಾ ಕಾರ್ಯಾಚರಣೆಯ ಮೂಲಕ 11 ಜನರನ್ನು ಸುರಕ್ಷಿತ ಪ್ರದೇಶಕ್ಕೆ ವಾಪಸು ಕರೆತರಲಾಗಿದ್ದು, ಇನ್ನೂ ಕೆಲವು ಚಾರಣಿಗರ ರಕ್ಷಣೆ ಆಗಬೇಕಿದೆ. ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ನಮ್ಮ ಸರ್ಕಾರವು ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.
ಸಚಿವರಾದ ಕೃಷ್ಣ ಬೈರೇಗೌಡ ಅವರಿಗೆ ಇಂದೇ ಡೆಹ್ರಾಡೂನ್‌ಗೆ ತೆರಳಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸುವಂತೆ ಸೂಚಿಸಿದ್ದೇನೆ. ಸ್ಥಳೀಯವಾಗಿ ಲಭ್ಯವಿರುವ ಹೆಲಿಕಾಪ್ಟರ್‌ಗಳು ಹಾಗೂ ಸೇನಾ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಿಕೊಂಡು ಅಪಾಯದಲ್ಲಿ ಸಿಲುಕಿರುವ ಕನ್ನಡಿಗರನ್ನು ಮರಳಿ ಗೂಡು ಸೇರಿಸಲಾಗುವುದು ಎಂದು ಹೇಳಿದ್ದಾರೆ.
ಉತ್ತರಾಖಂಡದ ಉತ್ತರಕಾಶಿಯಲ್ಲಿ ಪ್ರತಿಕೂಲ ಹವಾಮಾನಕ್ಕೆ (Uttarkashi Trekking Tragedy) ಸಿಲುಕಿ ಕರ್ನಾಟಕದ ಐವರು ಸೇರಿ 9 ಚಾರಣಿಗರು ಮೃತಪಟ್ಟಿರುವ ಘಟನೆ ನಡೆದಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಚಾರಣಿಗರು, ಟೂರ್ ಗೈಡ್‌ಗಳು ಸೇರಿ 22 ಮಂದಿ ತಂಡವೊಂದು ಉತ್ತರಕಾಶಿಯ ಎತ್ತರದ ಶಾಸ್ತ್ರತಾಳ್ ಪ್ರದೇಶಕ್ಕೆ ಚಾರಣಕ್ಕೆ ತೆರಳಿದ್ದಾಗ ಪ್ರತಿಕೂಲ ಹವಾಮಾನದಿಂದ ಅಪಾಯಕ್ಕೆ ಸಿಲುಕಿತ್ತು. ಚಾರಣದಿಂದ ಹಿಂತಿರುಗುವಾಗ ಅಪಾಯಕ್ಕೆ ಸಿಲುಕಿದ್ದ 13 ಮಂದಿ ಪೈಕಿ 9 ಮಂದಿ ಮೃತಪಟ್ಟಿದ್ದಾರೆ.