ಹೊಸದಿಗಂತ ವರದಿ ಬೆಳಗಾವಿ:
ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಪತನದ ದುರಂತದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದ ನಿವಾಸಿ, ಬೆಂಗಳೂರಿನ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸೋಲಂಕಿ (ಅರುಣ್ ಸಾಲುಂಕೆ) ಮೃತಪಟ್ಟಿದ್ದಾರೆ. ಅವರೊಂದಿಗೆ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಸ್ನೇಹಿತರ ಸುಳಿವು ಇನ್ನೂ ಲಭ್ಯವಾಗಿಲ್ಲ.
2007ನೇ ಬ್ಯಾಚ್ ನ ಪೊಲೀಸ್ ಅಧಿಕಾರಿಯಾಗಿದ್ದ ಅರುಣ್ ಸೋಲಂಕಿ ಅವರು ಆರಂಭದಲ್ಲಿ ದೆಹಲಿಯಲ್ಲಿ ಇಂಟಲಿಜೆನ್ಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ನೆಲಮಂಗಲ, ಕುಣಿಗಲ್ ಹಾಗೂ ಬಾಣಸವಾಡಿ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಬೆಂಗಳೂರಿನ ಅಪರಾಧ ವಿಭಾಗದ ಕೇಂದ್ರ ಅಪರಾಧ ದಳದಲ್ಲಿ (ಸಿಸಿಬಿ) ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಅರುಣ್ ಅವರು ತಮ್ಮ ಸ್ನೇಹಿತರೊಂದಿಗೆ ಚಾರ್ಧಾಮ್ ಯಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟಿದ್ದಾರೆ. ನಾಪತ್ತೆಯಾಗಿರುವ ನಾಲ್ವರು ಸ್ನೇಹಿತರಿಗಾಗಿ ಸ್ಥಳೀಯ ಪೊಲೀಸರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಮೃತ ಅರುಣ್ ಸೋಲಂಕಿ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ಬೆಂಗಳೂರಿನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಅವರ ತಂದೆ ಹಾಗೂ ಸಹೋದರರು ಸ್ವಗ್ರಾಮ ಅರಟಾಳದಲ್ಲಿದ್ದಾರೆ.
ಅರುಣ್ ಅವರ ಅಕಾಲಿಕ ನಿಧನದ ಸುದ್ದಿ ಅರಟಾಳ ಗ್ರಾಮ ಸೇರಿದಂತೆ ಅಥಣಿ ತಾಲೂಕಿನಲ್ಲಿ ದುಃಖದ ಛಾಯೆ ಮೂಡಿಸಿದೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಅಧಿಕಾರಿಯೊಬ್ಬರನ್ನು ಕಳೆದುಕೊಂಡಿರುವುದು ಸ್ಥಳೀಯರಲ್ಲಿ ತೀವ್ರ ನೋವುಂಟು ಮಾಡಿದೆ.



