November 20, 2026
Friday, November 20, 2026
spot_img

ವಿಶ್ವದಾದ್ಯಂತ 1500 ಕೋಟಿ ಬಾಚಿದ ‘ರಾಮಾಯಣ’: 15ನೇ ದಿನಕ್ಕೆ ಕಲೆಕ್ಷನ್‌ನಲ್ಲಿ ತುಸು ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುತ್ತಿರುವ ‘ರಾಮಾಯಣ’ ಸಿನಿಮಾ ಇದೀಗ 1500 ಕೋಟಿ ರೂಪಾಯಿಗಳ ಮಹತ್ವದ ಮೈಲಿಗಲ್ಲನ್ನು ದಾಟಿದೆ. ‘ಧುರಂಧರ್ 2’ ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ದೊಡ್ಡ ದಾಖಲೆಗಳನ್ನು ಈಗಾಗಲೇ ಪುಡಿಗಟ್ಟಿರುವ ಈ ಚಿತ್ರ, 15 ದಿನಗಳಲ್ಲಿ ಒಟ್ಟು 1547 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಆದರೆ, 1500 ಕೋಟಿ ಕ್ಲಬ್ ಸೇರಿದ ಬೆನ್ನಲ್ಲೇ ಸಿನಿಮಾದ ಗಳಿಕೆಯ ವೇಗದಲ್ಲಿ ತುಸು ಇಳಿಕೆ ಕಂಡುಬಂದಿದೆ.

14ನೇ ದಿನ 23.20 ಕೋಟಿ ರೂಪಾಯಿ ಗಳಿಸಿದ್ದ ‘ರಾಮಾಯಣ’, 15ನೇ ದಿನವಾದ ನಿನ್ನೆ (ನ 19) 19.35 ಕೋಟಿ ರೂಪಾಯಿ ಮಾತ್ರ ಗಳಿಸಿದೆ. 2000 ಕೋಟಿ ರೂಪಾಯಿಗಳ ಬೃಹತ್ ಗುರಿ ಹೊಂದಿರುವ ಈ ಸಿನಿಮಾಕ್ಕೆ ಇದು ಸ್ವಲ್ಪ ಕಡಿಮೆ ಮೊತ್ತ ಎನಿಸಿದೆ. ಸದ್ಯ ದೇಶಾದ್ಯಂತ ಈ ಚಿತ್ರದ 21,437 ಪ್ರದರ್ಶನಗಳು ನಡೆಯುತ್ತಿದ್ದು, ಹಿಂದಿ ಅವತರಣಿಕೆಯೊಂದೇ 17 ಸಾವಿರಕ್ಕೂ ಹೆಚ್ಚು ಶೋಗಳೊಂದಿಗೆ 14 ಕೋಟಿಗೂ ಅಧಿಕ ಹಣ ಬಾಚಿದೆ.

ದಕ್ಷಿಣ ಭಾರತದ ಕಲೆಕ್ಷನ್ ಗಮನಿಸಿದರೆ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಸಾಮಾನ್ಯವಾಗಿ ತೆಲುಗು ಅಥವಾ ತಮಿಳಿನಲ್ಲಿ ಹೆಚ್ಚು ಗಳಿಕೆ ಕಾಣುವ ಪರಭಾಷಾ ಚಿತ್ರಗಳಿಗೆ ವಿರುದ್ಧವಾಗಿ, ‘ರಾಮಾಯಣ’ ಮಲಯಾಳಂನಲ್ಲಿ ಅತಿ ಹೆಚ್ಚು ಅಂದರೆ 1.75 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಉಳಿದಂತೆ ತಮಿಳಿನಲ್ಲಿ 1.50 ಕೋಟಿ, ಕರ್ನಾಟಕದಲ್ಲಿ 1.40 ಕೋಟಿ ಹಾಗೂ ತೆಲುಗಿನಲ್ಲಿ 70 ಲಕ್ಷ ರೂಪಾಯಿ ಸಂಗ್ರಹವಾಗಿದೆ.

ಎರಡನೇ ವಾರದ ಬಳಿಕ ಗಳಿಕೆಯಲ್ಲಿ ಆಗಿರುವ ಈ ಸಣ್ಣ ಇಳಿಕೆಯು 2000 ಕೋಟಿ ರೂಪಾಯಿಗಳ ದಾಖಲೆಯ ನಿರೀಕ್ಷೆಯನ್ನು ತುಸು ಮಂಕಾಗಿಸಿದೆ. ಆದರೂ ಚಿತ್ರತಂಡ ಭರವಸೆ ಕಳೆದುಕೊಂಡಿಲ್ಲ. ಇಂದಿನಿಂದ ವಾರಾಂತ್ಯ ಆರಂಭವಾಗುತ್ತಿರುವುದರಿಂದ, ಮುಂದಿನ ಮೂರ್ನಾಲ್ಕು ದಿನಗಳ ಕಾಲ ಕುಟುಂಬ ಸಮೇತ ಪ್ರೇಕ್ಷಕರು ಚಿತ್ರಮಂದಿರಗಳತ್ತ ಹರಿದುಬರುವ ನಿರೀಕ್ಷೆಯಿದೆ. ವಾರಾಂತ್ಯದಲ್ಲಿ ಕಲೆಕ್ಷನ್ ಮತ್ತೆ ಪುಟಿದೆದ್ದರೆ, ‘ರಾಮಾಯಣ’ ಭಾರತದ ಎಲ್ಲಾ ಹಳೆಯ ದಾಖಲೆಗಳನ್ನು ಅಳಿಸಿ 2000 ಕೋಟಿ ರೂಪಾಯಿಗಳ ಶಿಖರ ಏರುವುದು ಖಚಿತ.

Must Read

Skip to toolbar