ಉತ್ತರಕಾಶಿ: ಅಗರ್​ ಯಂತ್ರದಲ್ಲಿ ಮತ್ತೊಮ್ಮೆ ತಾಂತ್ರಿಕ ದೋಷ; ಕಾರ್ಮಿಕರ ರಕ್ಷಣಾ ಕಾರ್ಯ ಸ್ಥಗಿತ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದುರಸ್ತಿಗೊಂಡಿದ್ದ ಅಗರ್​ ಯಂತ್ರದಲ್ಲಿ ಇದೀಗ ಮತ್ತೊಮ್ಮೆ ತಾಂತ್ರಿಕ ದೋಷ ಎದುರಾಗಿದ್ದು, ಡ್ರಿಲ್ಲಿಂಗ್​ ಅನ್ನು ಸ್ಥಗಿತಗೊಳಿಸಿ, ಯಂತ್ರವನ್ನು ಹೊರತರಲಾಗುತ್ತಿದೆ.

ಗುರುವಾರ ರಾತ್ರಿ ತಾಂತ್ರಿಕ ದೋಷ ಕಾಣಿಸಿಕೊಂಡು ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿಕೊಂಡಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ತಂಡ ತಯಾರಿ ಮಾಡಿಕೊಂಡಿತ್ತು. ಆದರೆ ಡ್ರಿಲ್ಲಿಂಗ್​ ಪ್ರಾರಂಭಿಸುವ ಹೊತ್ತಿಗೆ ಮತ್ತೆ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಇನ್ನೆರಡು ಗಂಟೆಗಳಲ್ಲಿ ಉಳಿದ ಎರಡು ಪೈಪ್​ಗಳನ್ನು ಸುರಂಗದೊಳಗೆ ಅಳವಡಿಸಲಾಗುವುದು. ಕೊಳವೆಗಳನ್ನು ಬೆಸುಗೆ ಹಾಕುವ ಕೆಲಸ ನಡೆಯುತ್ತಿದ್ದು, ಇದು ಸುಮಾರು ಎರಡು ಗಂಟೆಗಳನ್ನು ತೆಗೆದುಕೊಳ್ಳಲಿದೆ. ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಡ್ರಿಲ್ಲಿಂಗ್​ ಯಂತ್ರವೂ ದುರಸ್ತಿಗೊಂಡಿದೆ. ಮುಂದೆ ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ ಎಂದು ರಸ್ತೆ ಹಾಗೂ ಸಾರಿಗೆ ಹೆಚ್ಚುವರಿ ತಾಂತ್ರಿಕ ಕಾರ್ಯದರ್ಶಿ ಮಹಮ್ಮದ್​ ಅಹ್ಮದ್​ ಭರವಸೆ ವ್ಯಕ್ತಪಡಿಸಿದ್ದರು.

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದ ಒಳಗೆ ಸಿಲುಕಿಕೊಂಡಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ 13 ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ಸಂಜೆ ವೇಳೆಗೆ ಒಳಗೆ ಸಿಲುಕಿರುವ ಎಲ್ಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಗುರುವಾರ ರಾತ್ರಿ ಇನ್ನೇನು ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ಪೂರ್ಣಗೊಳ್ಳಬೇಕಿದ್ದ ಸಮಯಕ್ಕೆ ಡ್ರಿಲ್ಲಿಂಗ್​ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದ ಕಾರಣ ಕಾರ್ಯಾಚರಣೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿ ಬಂದಿತ್ತು.

ಸುಮಾರು 48 ಮೀಟರ್​ ಭಾಗದಲ್ಲಿ ಪೈಪ್​ಗಳು ಒಳಗೆ ಹೋಗಿದ್ದು, ಇನ್ನು 12 ಮೀಟರ್​ನಷ್ಟು ಭಾಗ ಹೋಗಬೇಕಿದೆ. ಆದರೆ ಈ 12 ಮೀಟರ್​ ಭಾಗ ಸಾಕಷ್ಟು ಸವಾಲಾಗಿದೆ. ಗುರುವಾರ ಕಾರ್ಯಾಚರಣೆ ವೇಳೆ ಡ್ರಿಲ್ಲಿಂಗ್​ ಯಂತ್ರ ಈ ಭಾಗಕ್ಕೆ ತಲುಪುವ ವೇಳೆಗೆ ಕಬ್ಬಿಣ ಸರಳುಗಳು ಸಿಕ್ಕಿ, ಅವುಗಳನ್ನು ಕತ್ತರಿಸುವ ವೇಳೆ ಅಗರ್​ ಯಂತ್ರ ಕೆಟ್ಟು ಹೋಗಿತ್ತು. ನಂತರ ದೆಹಲಿಯಿಂದ ತಂತ್ರಜ್ಞರನ್ನು ಕರೆಸಿ, ಯಂತ್ರದ ದುರಸ್ತಿ ಕೆಲಸ ಮಾಡಿಸಲಾಗಿದೆ. ಕಾರ್ಯಾಚರಣೆ ಮತ್ತೆ ಪ್ರಾರಂಭವಾಗಲಿದೆ ಎಂದು ಮಹಮ್ಮದ್​ ಅಹ್ಮದ್​ ತಿಳಿಸಿದ್ದರು.

ಗುರುವಾರದಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ, ಕಾರ್ಯಾಚರಣೆಯನ್ನು ಪರಿಶೀಲಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತವನ್ನು ತ್ವರಿತ ಗತಿಯಲ್ಲಿ ಹಾಗೂ ಸಂಪೂರ್ಣ ಎಚ್ಚರಿಕೆಯಿಂದ ನಡೆಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಉತ್ತರಕಾಶಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು. ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ. ಪ್ರಧಾನಿ ಮೋದಿ ಕೂಡ ನಿರಂತರವಾಗಿ ಸಿಬ್ಬಂದಿಯಿಂದ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ. ಜೊತೆಗೆ ಪರಿಹಾರಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುತ್ತಿದೆ. ಶೀಘ್ರ ಕಾರ್ಯಾಚರಣೆ ಮುಗಿದು ಎಲ್ಲಾ ಕಾರ್ಮಿಕರು ಹೊರಬರುವ ನಿರೀಕ್ಷೆಯಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!