July 6, 2026
Monday, July 6, 2026
spot_img

ಕೇರಳ ಸಿಎಂ ಗಾದಿಗೆ ವಿ.ಡಿ. ಸತೀಶನ್ ಆಯ್ಕೆ: ‘ಕೈ’ ಹೈಕಮಾಂಡ್‌ನಿಂದ ಅಧಿಕೃತ ಮುದ್ರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಹಲವು ದಿನಗಳಿಂದ ಕೇರಳ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಅಂತ್ಯಗೊಂಡಿದ್ದು, ಹಿರಿಯ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ನಡೆಸಿದ ಸರಣಿ ಸಭೆಗಳ ನಂತರ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಿಎಂ ಸ್ಥಾನಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ವಿ.ಡಿ. ಸತೀಶನ್ ನಡುವೆ ತೀವ್ರ ಪೈಪೋಟಿ ಇತ್ತು. ಆದರೆ, ಸ್ಥಳೀಯ ನಾಯಕರ ಅಭಿಪ್ರಾಯ ಮತ್ತು ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದ ಹೈಕಮಾಂಡ್, ಅಂತಿಮವಾಗಿ ಸತೀಶನ್ ಅವರಿಗೆ ಮಣೆ ಹಾಕಿದೆ.

ಇತ್ತೀಚೆಗೆ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಒಟ್ಟು 140 ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿತ್ತು. ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡ ಕಾಂಗ್ರೆಸ್, ದಶಕದ ನಂತರ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಯುಡಿಎಫ್ ಮೈತ್ರಿಕೂಟದ ಪ್ರಮುಖ ಶಕ್ತಿಯಾಗಿರುವ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ ಮೊದಲಿನಿಂದಲೂ ಸತೀಶನ್ ಅವರ ಪರ ಒಲವು ಹೊಂದಿತ್ತು. ಸತೀಶನ್ ಅವರ ಸಂಘಟನಾ ಚಾತುರ್ಯ ಮತ್ತು ವಿರೋಧ ಪಕ್ಷದ ನಾಯಕರಾಗಿ ಅವರು ನೀಡಿದ ಪ್ರಖರ ಹೋರಾಟವೇ ಈ ಉನ್ನತ ಹುದ್ದೆ ಅವರಿಗೆ ಒಲಿಯಲು ಪ್ರಮುಖ ಕಾರಣವಾಗಿದೆ.

ಈ ನೇಮಕಾತಿಯೊಂದಿಗೆ ಕೇರಳ ಕಾಂಗ್ರೆಸ್‌ನಲ್ಲಿ ಹೊಸ ಪರ್ವ ಆರಂಭವಾಗಿದ್ದು, ಸತೀಶನ್ ಅವರ ನೇತೃತ್ವದಲ್ಲಿ ರಾಜ್ಯವು ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !