ಮಡಿಕೇರಿಯ ಪಟ್ಟಣ ಪ್ರದೇಶಕ್ಕೂ ಲಗ್ಗೆ ಇಟ್ಟ ಗೋಭಕ್ಷಕ ವ್ಯಾಘ್ರ!

ಹೊಸದಿಗಂತ ವರದಿ,ಮಡಿಕೇರಿ:

ದಕ್ಷಿಣ‌ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಗೋವುಗಳ ಮೇಲೆ ದಾಳಿ‌ ನಡೆಸುತ್ತಿದ್ದ ಹುಲಿ ಇದೀಗ ಪಟ್ಟಣ ಪ್ರದೇಶಕ್ಕೂ ಕಾಲಿಟ್ಟಿದ್ದು, ಶನಿವಾರ ರಾತ್ರಿ ಗೋಣಿಕೊಪ್ಪ ಸಮೀಪದ ಅರುವತ್ತೊಕ್ಲು ಗ್ರಾಮದಲ್ಲಿ ಎರಡು ಹೋರಿಗಳ ಮೇಲೆ ದಾಳಿ‌ ನಡೆಸಿ ತೀವ್ರ‌ ಗಾಯಗೊಳಿಸಿದೆ.
ಅರುವತ್ತೊಕ್ಲುವಿನ ಕುಪ್ಪಂಡ ಸಂಜು ನಂಜಪ್ಪ ಎಂಬವರ ಎರಡು ಗೂಳಿಗಳ ಮೇಲೆ ಶನಿವಾರ ರಾತ್ರಿ ಎಂಟು ಗಂಟೆ ಸುಮಾರಿಗೆ‌ ಹುಲಿ ದಾಳಿ ನಡೆಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದೆ. ಸುಮಾರು ಒಂದು ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಈ‌ ಗೂಳಿಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ದಕ್ಷಿಣ ಕೊಡಗಿನ ವ್ಯಾಘ್ರನ ಅಟ್ಟಹಾಸಕ್ಕೆ ಕೊನೆ ಎಲ್ಲಿ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಕಳೆದ ವಾರದಲ್ಲಿ ಐದು ಹಸುಗಳನ್ನು ಬಲಿ ಪಡೆದಿದ್ದ ಹುಲಿಯನ್ನು ಸೆರೆ ಹಿಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅನುಮತಿ ನೀಡಿದ್ದರೂ,ಇಲಾಖೆ ಸಿಬ್ಬಂದಿಗಳು ಕಾಟಾಚಾರದ ಕಾರ್ಯಾಚರಣೆಯ ನಾಟಕವಾಡಿ ಕಾಲಹರಣ ಮಾಡಿತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಘಟನಾ ಸ್ಥಳಕ್ಕೆ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳ ತಂಡ ಭೇಟಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದೆ
ನುರಿತ ತಜ್ಞರ ತಂಡವನ್ನು ರಚಿಸಿ ಹುಲಿಯನ್ನು ಸೆರೆಹಿಡಿದು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಕೈಗೊಳ್ಳುವ ಭರವಸೆಯನ್ನು ಅರಣ್ಯಾಧಿಕಾರಿಗಳು ನೀಡಿದ್ದಾರೆ.
ಈ ಸಂದರ್ಭ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಅಲೆಮಾಡ ಮಂಜುನಾಥ್, ರೈತ ಮುಖಂಡರಾದ ಚೋಟ್ಟೆಕಾಳಪಂಡ ಮನು, ಪೆಮ್ಮಂಡ ಉಮೇಶ್, ಕಾಯಮಾಡ ಡಾಲಿ, ಅಮ್ಮತ್ತೀರ ಸುರೇಶ್, ತೀತರಮಾಡ ಸುನಿಲ್ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!