ಹೊಸದಿಗಂತ ವರದಿ,ಬಳ್ಳಾರಿ:
ವೈಕುಂಠ ಏಕಾದಶಿ ಹಿನ್ನೆಲೆ ನಗರ ಸೇರಿದಂತೆ ಜಿಲ್ಲೆಯ ಪ್ರಸಿದ್ಧ ವೆಂಕಟೇಶ್ವರ ದೇಗುಲ ಸೇರಿದಂತೆ ನಾನಾ ದೇಗುಲಗಳಲ್ಲಿ ಗುರುವಾರ ವಿಶೇಷ ಪೂಜೆ, ಅರ್ಚನೆ ಸೇರಿ ನಾನಾ ಪೂಜೆಗಳು ವಿಜೃಂಭಣೆಯಿಂದ ನಡೆದವು. ನಗರದ ಸತ್ಯನಾರಾಯಣ ಪೇಟೆ ವೆಂಕಟೇಶ್ವರ ದೇಗುಲ, ಪಟೇಲ್‌ನಗರ ಬಡಾವಣೆಯ ಲಕ್ಷ್ಮೀ ವೆಂಕಟೇಶ್ವರ ದೇಗುಲ, ಲಕ್ಷ್ಮೀ ನರಸಿಂಹ ದೇಗುಲ, ಯಂತ್ರೋದ್ದಾರಕ ಪ್ರಾಣದೇವರ ದೇಗುಲ, ಶನೇಶ್ವರ ದೇವಾಲಯ, ರಾಘವೇಂದ್ರ ಸ್ವಾಮಿ ಶ್ರೀಮಠ, ಶ್ರೀಮದುತ್ತರಾಧಿಮಠದಲ್ಲಿ ವೈಕುಂಠ ಏಕಾದಶಿ ನಿಮಿತ್ತ ಗುರುವಾರ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು. ನಗರದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಅಲಂಕಾರ, ಮಹಾ ನೈವೇದ್ಯ, ಮಹಾ ಮಂಗಳಾರತಿ ಸೇರಿದಂತೆ ನಾನಾ ಪೂಜೆಗಳು ನೆರವೇರಿದವು. ದೇಗುಲದ ಪ್ರಧಾನ ಅರ್ಚಕ ವಾದಿರಾಜ್ ಆಚಾರ್ಯ ಅವರು ಪೂಜೆಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇಗುಲದ ಟ್ರಸ್ಟಿಗಳಾದ ಎಂ.ವೆಂಕಟ ರಾಘವೆಂದ್ರ ಅವರು ಮಾತನಾಡಿ, ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಶ್ರೀ ವೆಂಕಟೇಶ್ವರ ದರ್ಶನಕ್ಕೆ ಪ್ರಸಕ್ತ ವರ್ಷ ಕೊರೊನಾ ಅಡ್ಡಿಯಾಗಿದೆ. ಪವಿತ್ರ ದಿನವಾದ ಇಂದು ಭಕ್ತರು ವೆಂಕಟೇಶ್ವರ ನ ದರ್ಶನ ಪಡೆಯಬೇಕು ಎನ್ನುವ ಅಪೇಕ್ಷೇ ಎಲ್ಲರಿಗೂ ಇರಲಿದೆ. ಆದರೇ, ಪ್ರಸಕ್ತ ವರ್ಷ ಕೋವಿಡ್-19 ಹಿನ್ನೆಲೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಭಕ್ತರಿಗೆ ಹಾಗೂ ನಮಗೂ ನಾನಾ ರೀತಿ ತೊಂದರೆಯಾಗಿದೆ. ಎರಡೂ ಡೋಸ್ ಲಸಿಕೆ ಕಡ್ಡಾಯ, ಅದೂ ಸರ್ಟಿಫಿಕೇಟ್ ಹಾಜರುಪಡಿಸಬೇಕು, ಐವತ್ತು ಜನರಿಗೆ ಮಾತ್ರ ಪ್ರವೇಶ ಎನ್ನುವುದು ಸೇರಿ ನಾನಾ ಷರತ್ತುಗಳನ್ನು ವಿಧಿಸಲಾಗಿದೆ. ಈ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ, ಅಲಂಕಾರ ಸೇರಿದಂತೆ ನಾನಾ ಪೂಜೆಗಳನ್ನು ನೆರವೇರಿಸಲಾಗಿದ್ದು, ಭಕ್ತರಿಗೆ ಹೊರಗಿನಿಂದಲೇ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಭಕ್ತರಿಗೆ ಪ್ರಸಾದ: ನಗರದ ಪಟೇಲ್ ನಗರ ಬಡಾವಣೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇಗುಲದಲ್ಲಿ ವೈಕುಂಠ ಏಕಾದಶಿ ನಿಮಿತ್ತ ಗುರುವಾರ ವಿವಿಧ ಪೂಜೆಗಳು ನೆರವೇರಿದವು. ದೇಗುಲದ ಅದ್ಯಕ್ಷ ಸೋಮಪ್ಪ ಯಾದವ್ ಅವರು ಭಕ್ತರಿಗೆ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ್ ಆಚಾರ್, ಪಾಲಿಕೆ ಸದಸ್ಯರಾದ ಮುಲ್ಲಂಗಿ ನಂದೀಶ್, ವಿವೇಕ್ ವಿಕ್ಕಿ, ಇತರರಿದ್ದರು.