ಪ್ರತಿದಿನ ಒಂದೇ ರೀತಿಯ ಬ್ರೇಕ್ ಫಾಸ್ಟ್ ತಿನ್ನೋಕೆ ಬೇಜಾರಾ? ಹಾಗಾದರೆ ಮನೆಯಲ್ಲಿರುವ ರವೆ ಬಳಸಿ ಸುಲಭವಾಗಿ ಸೂಜಿ ಬಾಲ್ಸ್ (ರವೆ ಉಂಡೆಗಳು) ರೆಡಿ ಮಾಡಿ. ಕಡಿಮೆ ಸಮಯದಲ್ಲಿ ಸಿದ್ಧವಾಗುವ ಈ ಉಪಾಹಾರ ಆರೋಗ್ಯಕರವಾಗಿದ್ದು, ಮಕ್ಕಳ ಫೇವರಿಟ್ ಆಗೋದ್ರಲ್ಲಿ 2 ಮಾತಿಲ್ಲ
ಬೇಕಾಗುವ ಸಾಮಗ್ರಿಗಳು
ರವೆ – 1 ಕಪ್
ನೀರು – 2 ಕಪ್
ತುಪ್ಪ – 1 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ½ ಟೀ ಸ್ಪೂನ್
ಒಗ್ಗರಣೆಗೆ
ತುಪ್ಪ ಅಥವಾ ಎಣ್ಣೆ – 2 ಟೇಬಲ್ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಇಂಗು – ಒಂದು ಚಿಟಿಕೆ
ಎಳ್ಳು – 1 ಟೀ ಸ್ಪೂನ್
ಕರಿಬೇವು – ಸ್ವಲ್ಪ
ಹಸಿಮೆಣಸಿನಕಾಯಿ – 2
ಒಣ ಮೆಣಸಿನಕಾಯಿ – 2
ಕಾಶ್ಮೀರಿ ಮೆಣಸಿನ ಪುಡಿ – ½ ಟೀ ಸ್ಪೂನ್
ಪೋಡಿ ಮಸಾಲಾ – 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ನೀರು, ಉಪ್ಪು ಮತ್ತು ತುಪ್ಪ ಹಾಕಿ ಕುದಿಯಲು ಬಿಡಿ. ನೀರು ಚೆನ್ನಾಗಿ ಕುದಿದ ಬಳಿಕ ರವೆಯನ್ನು ನಿಧಾನವಾಗಿ ಹಾಕುತ್ತಾ ನಿರಂತರವಾಗಿ ಕಲಸಿ. ಉಂಡೆ ಕಟ್ಟದಂತೆ ನೋಡಿಕೊಳ್ಳಿ. ಮಿಶ್ರಣ ಗಟ್ಟಿಯಾದ ಹಿಟ್ಟಿನ ಹದಕ್ಕೆ ಬಂದ ಬಳಿಕ ಸ್ಟೌವ್ ಆಫ್ ಮಾಡಿ.
ಮಿಶ್ರಣ ಸ್ವಲ್ಪ ತಣ್ಣಗಾದ ನಂತರ ಕೈಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿಕೊಂಡು ಸಣ್ಣ ಸಣ್ಣ ಉಂಡೆಗಳಂತೆ (ಬಾಲ್ಸ್) ಮಾಡಿಕೊಳ್ಳಿ.
ಈ ಉಂಡೆಗಳನ್ನು ಇಡ್ಲಿ ಪಾತ್ರೆಯಲ್ಲಿ 10–15 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿಕೊಳ್ಳಿ.
ಈಗ ಒಂದು ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಎಳ್ಳು ಮತ್ತು ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಹಸಿಮೆಣಸಿನಕಾಯಿ, ಒಣ ಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ.
ಕಾಶ್ಮೀರಿ ಮೆಣಸಿನ ಪುಡಿ ಮತ್ತು ಪೋಡಿ ಮಸಾಲಾ ಸೇರಿಸಿ ಕಲಸಿ. ಬಳಿಕ ಹಬೆಯಲ್ಲಿ ಬೇಯಿಸಿದ ಸೂಜಿ ಬಾಲ್ಸ್‌ಗಳನ್ನು ಸೇರಿಸಿ ನಿಧಾನವಾಗಿ ತಿರುಗಿಸಿ, ಒಗ್ಗರಣೆ ಎಲ್ಲೆಡೆ ಚೆನ್ನಾಗಿ ಅಂಟಿಕೊಳ್ಳುವಂತೆ ಮಾಡಿ.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ ಬಿಸಿಬಿಸಿಯಾಗಿ ಸರ್ವ್ ಮಾಡಿ.



