ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಆತ್ಮಹತ್ಯೆ ಕುರಿತಾಗಿ ಪತ್ನಿ ಮೇಘನಾ ಪೊಲೀಸರಿಗೆ ಕೊಟ್ಟಿರುವ ದೂರಿನ ಪ್ರತಿ ಇದೀಗ ಲಭ್ಯವಾಗಿದೆ. ಇದರಲ್ಲಿ ಮೇಘನಾ ತಮ್ಮ ಪತಿಗೆ ಕೃಷಿ ಜತೆ ಅನೈತಿಕ ಸಂಬಂಧ ಇತ್ತು ಎಂದು ಹೇಳಿದ್ದಾರೆ.
ಆರ್‌ಆರ್‌ನಗರ ಠಾಣೆಯಲ್ಲಿ ಮೇಘನಾ ದೂರು ದಾಖಲಿಸಿದ್ದು, ನನ್ನ ಪತಿ ಹಾಗೂ ಕೃಷಿ ತಾಪಂಡ ನಡುವೆ ಸಂಬಂಧ ಇದ್ದಿದ್ದು ಹೌದು. ನಾನು ವೈಶಾಖ್ 2010ರ ಅ.11ರಂದು ಮದುವೆಯಾಗಿದ್ದೆವು. ವೀರಭದ್ರನಗರದಲ್ಲಿರುವ ಶ್ರೀ ಅಡಿಗ ಆಟೋಮೋಟೀವ್ಸ್ ನಮ್ಮದೇ. ನಮ್ಮ ಮಧ್ಯೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಒಂದು ದಿನ ಟಿವಿಯಲ್ಲಿ ನನ್ನ ಪತಿ ಹಾಗೂ ನಟಿ ಕೃಷಿ ತಾಪಂಡ ಮಧ್ಯೆ ಅನೈತಿಕ ಸಂಬಂಧ ಇದೆ ಎನ್ನುವ ಸುದ್ದಿ ಬಂದಿತ್ತು. ಇದಾದ ನಂತರ ಎಲ್ಲರ ಮುಂದೆ ಕುಳಿತು ಅವರು ಸಂಬಂಧ ಇರುವುದನ್ನು ಒಪ್ಪಿಕೊಂಡಿದ್ದರು. ಬುದ್ಧಿವಾದವನ್ನು ಕೇಳಿ ಇನ್ನೊಮ್ಮ ಕೃಷಿ ಜೊತೆ ಮಾತನಾಡುವುದಿಲ್ಲ ಈ ಸಂಬಂಧವನ್ನು ಇಲ್ಲಗೇ ಮುಗಿಸುತ್ತೇನೆ ಎಂದು ಹೇಳಿದ್ದರು ಎನ್ನಲಾಗಿದೆ.
ಆದರೆ ಬರೀ ಮಾತಿನಲ್ಲಿ ಮಾತ್ರ ಅವರು ಹೇಳಿದ್ದರು. ರಾಜಿ ಸಂಧಾನದ ನಂತರವೂ ಸಂಬಂಧ ಮುಂದುವರಿದಿತ್ತು. ಈ ಬಗ್ಗೆ ಮನೆಯಲ್ಲಿ ಮಾತನಾಡಿದ್ದಕ್ಕೆ ವೈಶಾಖ್ ಒಂದು ತಿಂಗಳಿನಿಂದ ಮನೆಗೆ ಬಂದಿರಲಿಲ್ಲ. ಮಾತೂ ಇರಲಿಲ್ಲ. ಮೆಸೇಜ್ ಮಾತ್ರ ಮಾಡುತ್ತಿದ್ದರು. ಜೂ.24ರಂದು ಸಂಜೆ 5:30ರ ಸುಮಾರಿಗೆ ಮೆಸೇಜ್ ಮಾಡಿ ಮಗ ಶಾಲೆಯಿಂದ ಬಂದನಾ ಎಂದು ಕೇಳಿದ್ದರು. ಹೌದು ಬಂದಿದ್ದಾನೆ ಎಂದು ಹೇಳಿದೆ. ಇದಾದಮೇಲೆ ಯಾವ ಮಾತುಕತೆ ಇಲ್ಲ.
ಅದೇ ದಿನ ರಾತ್ರಿ ನಮ್ಮ ಮಾವನಿಗೆ ಪೊಲೀಸರಿಂದ ಕರೆ ಬಂದಿತ್ತು. ನಿಮ್ಮ ಮಗ ನಟಿ ಕೃಷಿ ತಾಪಂಡ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದರು. ತಕ್ಷಣವೇ ಅವರ ಮನೆಗೆ ಹೋದೆವು. ನನ್ನ ಪತಿ ಕೃಷಿ ರೂಮಿನಲ್ಲಿ ಮಂಚದ ಮೇಲೆ ಅಂಗಾತವಾಗಿ ಮಲಗಿದ್ದರು. ನಾಲಿಗೆ ಹೊರಗಿತ್ತು, ಕಣ್ಣು ಅರ್ಧ ತೆಗೆದಿತ್ತು. ಕುತ್ತಿಗೆ ಭಾಗದಲ್ಲಿ ಮಾರ್ಕ್ ಆಗಿತ್ತು. ಫ್ಯಾನ್‌ಗೆ ನೇತಾಡುತ್ತಿದ್ದ ಸೀರೆ ಅರ್ಧ ಕಟ್ ಆದ ರೀತಿಯಲ್ಲಿ ಹಾಗೆಯೇ ಇತ್ತು.
ಪೊಲೀಸರು ಮುಂದಿನ ಕಾರ್ಯಕ್ಕೆ ನನ್ನ ಗಂಡನ ಮೃತದೇಹವನ್ನ ಆಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದರು. ನನ್ನ ಪತಿ ಯಾವ ಕಾರಣಕ್ಕೆ ನೇಣು ಹಾಕಿಕೊಂಡರು ಎಂಬುದು ನನಗೆ ಗೊತ್ತಿಲ್ಲ. ಸಾವಿನ ಬಗ್ಗೆ ನನಗೆ ಯಾರ ಮೇಲೂ ಅನುಮಾನವಿಲ್ಲ. ಹೀಗಾಗಿ ಸಾವಿನ ಸ್ಪಷ್ಟ ಕಾರಣ ತಿಳಿಯಲು ಕರ್ತವ್ಯ ನಿರತ ವೈದ್ಯರಿಂದ ಮರಣೋತ್ತರ ಪರೀಕ್ಷೆ ಮಾಡಿಸಿ, ಬಳಿಕ ಮೃತದೇಹವನ್ನು ನಮಗೆ ನೀಡಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.



