ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಲ್ಮೀಕಿ ನಿಗಮ ಅವ್ಯವಹಾರ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಶೀಘ್ರದಲ್ಲೇ ಬಿಜೆಪಿ ಪಾದಯಾತ್ರೆ ನಡೆಸಲಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಕ್ಲೀನ್ ಚಿಟ್ ನೀಡಲು ಎಸ್‌ಐಟಿ ರಚಿಸಲಾಗಿದೆ ಎನ್ನಲಾಗಿದ್ದು, ಇದರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಹೈಕಮಾಂಡ್ ನಮಗೆ ಸಲಹೆ ನೀಡಿದ್ದು, ವಾಲ್ಮೀಕಿ ಹಗರಣದಲ್ಲಿ ನಮ್ಮ ಎರಡನೇ ಹಂತದ ಹೋರಾಟ ಶುರುವಾಗಲಿದೆ ಎಂದು ಹೇಳಿದ್ದಾರೆ.
ಪಕ್ಷದ ಬೆಂಗಳೂರು-ಮೈಸೂರು ಪಾದಯಾತ್ರೆಯಲ್ಲಿ ಮುಡಾ ಹಗರಣ ಗಮನ ಸೆಳೆದಿತ್ತು. ಹೀಗಾಗಿ ವಾಲ್ಮೀಕಿ ನಿಗಮ ಹಗರಣ ಹಲವರ ಗಮನಕ್ಕೆ ಬರಲಿಲ್ಲ. ಎಸ್‌ಟಿ ಅಭಿವೃದ್ಧಿ ನಿಗಮದ ಹಗರಣವನ್ನು ಎತ್ತಿ ಹಿಡಿದು ಪಾದಯಾತ್ರೆ ಕೈಗೊಳ್ಳುವ ರಾಜ್ಯ ನಾಯಕರ ಸಲಹೆಗಳಿಗೆ ಕೇಂದ್ರ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಪಾದಯಾತ್ರೆಯ ವಿವರವನ್ನು ಬಿಜೆಪಿ ರಾಜ್ಯಾಧ್ಯಕ್ಷರು ನಿರ್ಧರಿಸುತ್ತಾರೆ ಎಂದು ತಿಳಿಸಿದರು.
ಬಳ್ಳಾರಿಗೆ ಪಾದಯಾತ್ರೆ ಆಯೋಜಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಹುಶಃ ಆ ಪ್ರದೇಶದಲ್ಲಿ ನಡೆಯಬಹುದು, ಆದರೆ, ಎಲ್ಲವನ್ನೂ ಪಕ್ಷದ ನಾಯಕರು ನಿರ್ಧರಿಸುತ್ತಾರೆ ಎಂದರು.