ದೇಶದೇಶಗಳಿಗೆ ಸಾಂಸ್ಕೃತಿಕ ರಾಯಭಾರಿ, ನಮ್ಮ ಉಡುಪಿಯ ಯಕ್ಷಗುರು ಸಂಜೀವಣ್ಣಗೆ ಇಂದು 70ರ ಸಂಭ್ರಮ!

ಹೊಸದಿಗಂತ ವರದಿ ಬೆಂಗಳೂರು:

ತಾವು ಓದಿದ್ದು ಎರಡನೇ ತರಗತಿ. ಆದರೆ, ತನ್ನನ್ನೇ ನಂಬಿ ಜೊತೆಯಲ್ಲಿದ್ದವರನ್ನು ಓದಿಸಿದ್ದು ಪದವಿ, ಸ್ನಾತಕ್ಕೋತ್ತರ ಪದವಿ. ಅಷ್ಟೇ ಅಲ್ಲ, ಅವರ ಜೀವನ ಚರಿತ್ರೆಯನ್ನು ಮಂಗಳೂರು ವಿವಿ ಬಿಎ ಪದವಿ ವಿದ್ಯಾರ್ಥಿಗಳು ಓದುತ್ತಿದ್ದಾರೆ..

ಆ ಧೀಮಂತ ವ್ಯಕ್ತಿಯೇ ಉಡುಪಿಯ ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ.

ಜ್ಞಾನಪೀಠ ಪುರಸ್ಕೃತ ಕೋಟ ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿದ ಬನ್ನಂಜೆ ಸಂಜೀವ ಸುವರ್ಣರಿಗೆ ಇಂದು 70ರ ಜನ್ಮದಿನದ ಸಂಭ್ರಮ. ಅವರದ್ದು ಸುಮಾರು ಆರು ದಶಕಗಳ ಯಕ್ಷಗಾನ ಕಲಾಸೇವೆ. ಅವರು ಕಲಾವಿದ, ಗುರು ಮಾತ್ರವಲ್ಲ, ಬಡ ಮಕ್ಕಳ ಪಾಲಿಗೆ ಅಪ್ಪ-ಅಮ್ಮ ಎಲ್ಲವೂ ಹೌದು.

ನೂರಾರು ಮಕ್ಕಳಿಗೆ ಇವರೇ ಅಪ್ಪ-ಅಮ್ಮ
ಕಾರಂತರು ಸ್ಥಾಪಿಸಿದ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಗುರುಕುಲ ಮಾದರಿಯಲ್ಲಿ ಬರೋಬ್ಬರಿ 42 ವರ್ಷಗಳ ಕಾಲ ಸಾಂಪ್ರದಾಯಿಕ ಯಕ್ಷಗಾನ ಪಾಠವನ್ನು ಸಾವಿರಾರು ಜನರಿಗೆ ಧಾರೆ ಎರೆದಿದ್ದಾರೆ. ಇದರೊಂದಿಗೆ ಕೇಂದ್ರದಲ್ಲಿದ್ದು ಯಕ್ಷಗಾನ ಕಲಿಯುತ್ತಿದ್ದ ಸುಮಾರು 750-800 ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ರಾಜ್ಯದ ಬಡ, ಅನಾಥ ಮಕ್ಕಳು ಮಾತ್ರವಲ್ಲದೇ ಕೇರಳ, ತಮಿಳುನಾಡಿನ ಮಕ್ಕಳು ಕೂಡ ಇಲ್ಲಿ ಆಶ್ರಯ ಮತ್ತು ಶಿಕ್ಷಣ ಪಡೆದಿದ್ದಾರೆ. ಉಡುಪಿಯ ವಿವಿಧ ಶಾಲೆ-ಕಾಲೇಜುಗಳಲ್ಲಿ ಶಿಕ್ಷಣ ಕೊಡಿಸಿ, ಉನ್ನತ ಶಿಕ್ಷಣದ ಹಂಬಲವಿರುವವರಿಗೆ ಅದನ್ನೂ ಓದಿಸಿದ್ದಾರೆ. ಹೀಗೆ ಕಲಿತವರು ಇಂಜಿನಿಯರ್, ಸರ್ಕಾರಿ ಅಧಿಕಾರಿ, ಪ್ರಾಧ್ಯಾಪಕ, ಕಲಾವಿದ ಹೀಗೆ ನಾನಾ ವೃತ್ತಿಯಲ್ಲಿ ತೊಡಗಿದ್ದಾರೆ. ಆದರೆ, ಯಕ್ಷಗಾನ ಗುರು ಎಂದು ಜಗತ್ತಿಗೆ ಪರಿಚಿತರಾಗಿರುವ ಸಂಜೀವ ಸುವರ್ಣರ ಸೇವೆಯ ಈ ಮುಖ ಬಹುತೇಕ ಜನರಿಗೆ ಗೊತ್ತಿಲ್ಲ.

ಅವರು ಪುರಸ್ಕಾರಗಳು ಮತ್ತು ಪ್ರಶಸ್ತಿಗಳಿಂದ ಗಳಿಸಿದ ಹಣವನ್ನು ನಿಸ್ವಾರ್ಥವಾಗಿ ಈ ಮಕ್ಕಳ ಶಿಕ್ಷಣಕ್ಕಾಗಿಯೇ ವಿನಿಯೋಗಿಸಿದ್ದಾರೆ. ಅವರಿಗೆ ಇದು ತಪಸ್ಸು. ಎರಡು ವರ್ಷಗಳ ಹಿಂದೆ ಯಕ್ಷಗಾನ ಕೇಂದ್ರದಿಂದ ಹೊರ ಬಂದ ನಂತರವೂ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದ ಮೂಲಕ ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಕಲೆ ಶಿಕ್ಷಣದ ಜೊತೆ ಬದುಕಿನ ಮೌಲ್ಯದ ಪಾಠ ನೀಡುವುದು ನಿಜವಾದ ಗುರುವಿನ ಕೆಲಸ ಎಂಬುದು ಅವರ ಅಭಿಮತ.

52 ದೇಶಗಳಲ್ಲಿ ಕಲಾ ಪಯಣ
ಕಾರಂತರ ಗರಡಿಯಲ್ಲಿ ಯಕ್ಷಗಾನ ಮತ್ತು ಬ್ಯಾಲೆಯ ಶಿಕ್ಷಣ ಪಡೆದ ಸಂಜೀವ ಸುವರ್ಣರು ಯಕ್ಷಗಾನವನ್ನೇ ಜೀವನ ಮಾಡಿಕೊಂಡಿದ್ದಾರೆ. ಕಾರಂತರಲ್ಲದೇ 20 ಗುರುಗಳಲ್ಲಿ ಯಕ್ಷಗಾನ ಅಭ್ಯಾಸ ನಡೆಸಿದ್ದಾರೆ. ಅವರು ಯಕ್ಷಗಾನದಲ್ಲಿನ ಹಳೆಯ ಸಾಂಪ್ರದಾಯಿಕ ಅಡೆತಡೆಗಳನ್ನು ತೊಡೆದು ಹಾಕಿ ದಲಿತರು, ಬುಡಕಟ್ಟು, ಮಹಿಳೆಯರು ಮತ್ತು ವಿಶಿಷ್ಟಚೇತನ ಮಕ್ಕಳಿಗೂ ಯಕ್ಷಗಾನ ಶಿಕ್ಷಣ ಸಿಗುವಂತೆ ಮಾಡಿದ್ದಾರೆ. ವೈದ್ಯರು, ಶಾಸಕ, ಸಂಸದರು, ಉಪನ್ಯಾಸಕರು ಹೀಗೆ ಎಲ್ಲ ವರ್ಗದವರಿಗೂ ಯಕ್ಷಗಾನ ಕಲಿಸಿದ್ದಾರೆ. ಯಕ್ಷಗಾನಕ್ಕೆ ಶಾಸ್ತ್ರೀಯ ಮತ್ತು ವ್ಯವಸ್ಥಿತ ವಿಧಾನ ಪರಿಚಯಿಸಿ, ಅದರ ಕಲಾತ್ಮಕ ಮಾನದಂಡಗಳನ್ನು ಉನ್ನತೀಕರಿಸಿದ್ದಾರೆ. ಇಲ್ಲಿಯವರೆಗೆ, ಅವರು ಜರ್ಮನಿ, ಇಟಲಿ, ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ 52 ದೇಶಗಳಲ್ಲಿ ಕಲಾ ಪ್ರದರ್ಶನ ಮತ್ತು ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

ಎನ್‌ಎಸ್‌ಡಿ ವಿದ್ಯಾರ್ಥಿಗಳಿಗೂ ತರಬೇತಿ
ಸಂಜೀವ ಸುವರ್ಣರ ಕಲಾ ಪ್ರೌಢಿಮೆ ಯಕ್ಷಗಾನವನ್ನೂ ಮೀರಿ ವಿಸ್ತರಿಸಿದೆ. ಅವರ ಪ್ರಾವೀಣ್ಯತೆಯು ಕ್ರಿಯಾತ್ಮಕ ಹುಲಿವೇಷ ನೃತ್ಯ, ಕೋಲಾಟದ ಸಾಂಪ್ರದಾಯಿಕ ಸಮರ ಕಲೆ ಮತ್ತು ಕರಾವಳಿಯ ಜಾನಪದದ ಆಳವಾದ ತಿಳುವಳಿಕೆ ಒಳಗೊಂಡಿದೆ. ಅವರು ಕಥಕ್, ಕೂಡಿಯಟ್ಟಂ ಮತ್ತು ಭರತನಾಟ್ಯವನ್ನೂ ಕಲಿತಿದ್ದಾರೆ. ಅಲ್ಲದೇ ಅವರು ಸಾಂಪ್ರದಾಯಿಕ ರಂಗಭೂಮಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆ ದಿಲ್ಲಿ, ವಾರಣಾಸಿ, ಭೋಪಾಲ್, ಸಿಕ್ಕಿಂ ಮೊದಲಾದ ಕಡೆಗಳಲ್ಲಿ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

ಪಂಚ ಭಾಷೆಗಳಲ್ಲಿ ಯಕ್ಷಗಾನ
ಸಂಜೀವ ಸುವರ್ಣರು 1983 ರಲ್ಲಿ ಮೊದಲ ಸಂಸ್ಕೃತ ಯಕ್ಷಗಾನ ನಿರ್ದೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 2021ರಲ್ಲಿ ಹಿಂದಿಯಲ್ಲಿ ಅಭಿಮನ್ಯು ಚಕ್ರವ್ಯೂಹ ಪ್ರಸಂಗವನ್ನು ತಂದಿದ್ದಾರೆ. ಮರಾಠಿಯಲ್ಲಿ ನಿರ್ದೇಶಿಸಿದ್ದಾರೆ. ಇಲ್ಲಿಯವರೆಗೆ ಕನ್ನಡ, ತುಳು ಸೇರಿ ಒಟ್ಟು ಐದು ಭಾಷೆಗಳಲ್ಲಿ ಯಕ್ಷಗಾನವನ್ನು ರಂಗಸ್ಥಳಕ್ಕೆ ತಂದಿದ್ದಾರೆ. ಈ ಮೂಲಕ ಸಾಂಸ್ಕೃತಿಕ ವೈವಿಧ್ಯತೆ ಬೆಳೆಸಿ ಹೊಸ ಪ್ರೇಕ್ಷಕರನ್ನು ತಲುಪಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!