ಹೊಸದಿಗಂತ ವರದಿ ಬಳ್ಳಾರಿ:
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣದ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವತಿಯಿಂದ ನಗರದ ಡಿಸಿ ಕಚೇರಿ ಬಳಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಕೆಎಂಎಫ್ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ ಅವರ ನೇತೃತ್ವದಲ್ಲಿ ಸೋಮವಾರದಿಂದ ಧರಣಿ ಆರಂಭವಾಗಿದ್ದು, ಮಾಜಿ ಸಂಸದ ಸಣ್ಣ ಫಕೀರಪ್ಪ, ನಗರ ಅಧ್ಯಕ್ಷ ಜಿ. ವೆಂಕಟರಮಣ, ಪಾಲಿಕೆ ಸದಸ್ಯರು ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಧರಣಿ ವೇದಿಕೆಯಲ್ಲೇ ರಾತ್ರಿ ಕಳೆದರು.
ಮಂಗಳವಾರವೂ ಪ್ರತಿಭಟನೆ ಮುಂದುವರಿದಿದ್ದು, ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದರು.
ಇದನ್ನೂ ಓದಿ:
ಈ ವೇಳೆ ಗಾಲಿ ಸೋಮಶೇಖರ್ ರೆಡ್ಡಿ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮಕ್ಕೆ ಸಂಬಂಧಿಸಿದ ತನಿಖೆಗಳು ಮುಂದುವರಿದಿರುವ ಸಂದರ್ಭದಲ್ಲಿ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ಖಂಡನೀಯ ಎಂದರು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ 187 ಕೋಟಿ ರೂ ಹಣ ದುರ್ಬಳಕೆಯಾಗಿದೆ ಎಂಬ ಆರೋಪವಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ ಮಾತನಾಡಿ, ಸಚಿವ ನಾಗೇಂದ್ರ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವವರೆಗೆ ಅಹೋರಾತ್ರಿ ಧರಣಿ ಮುಂದುವರಿಯಲಿದೆ. ರಾಜೀನಾಮೆ ನೀಡುವವರೆಗೂ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಸ್. ಗುರುಲಿಂಗನ ಗೌಡ, ಜಿ. ವೆಂಕಟರಮಣ, ಎಚ್. ಹನುಮಂತಪ್ಪ, ಸುರೇಖಾ ಮಲ್ಲನಗೌಡ, ಶ್ರೀನಿವಾಸ್ ಮೊತ್ಕರ್, ಚೇತನ ವೇಮಣ್ಣ, ಕೆ. ಹನುಮಂತಪ್ಪ, ಗುಡಿಗಂಟೆ ಹನುಮಂತ, ಗೋವಿಂದರಾಜಲು, ವಿಜಯಲಕ್ಷ್ಮೀ ಕರೂರು, ಸುಗುಣ ರೆಡ್ಡಿ ಸೇರಿದಂತೆ ನೂರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.



