ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಮಹಿಳಾ ದಿನವಾದಂದು ಭಾರತದ ಚೆಸ್ ತಾರೆ, ಗ್ರ್ಯಾಂಡ್ ಮಾಸ್ಟರ್ ಆರ್.ವೈಶಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯನ್ನು ನಿಭಾಯಿಸಿದರು.
ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಧಾನಿ ಅವರ ಎಕ್ಸ್ ಖಾತೆಯ ಹ್ಯಾಂಡಲ್ನ್ನು ಮಹಿಳಾ ಸಾಧಕರಿಗೆ ಹಂಚಿಕೊಳ್ಳಲಾಗಿತ್ತು. ಈ ಮೂಲಕ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಲಾಗಿತ್ತು. ಹೀಗಾಗಿ ವೈಶಾಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮಹಿಳೆಯರಿಗೆ ತಮ್ಮ ಕನಸುಗಳನ್ನು ಮುಂದುವರಿಸಲು ಪ್ರೋತ್ಸಾಹಿಸುವ ಸಲುವಾಗಿ ಪ್ರಬಲ ಸಂದೇಶವನ್ನು ರವಾನಿಸಿದರು.
ವನಕ್ಕಮ್!(ನಮಸ್ಕಾರ)… ‘ನಾನು ವೈಶಾಲಿ, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮಹಿಳಾ ದಿನದಂದು ಅಭಿಪ್ರಾಯ ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ. ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ನಾನು ಚೆಸ್ ಆಡುತ್ತೇನೆ ಮತ್ತು ಅನೇಕ ಪಂದ್ಯಾವಳಿಗಳಲ್ಲಿ ನಮ್ಮ ಪ್ರೀತಿಯ ದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ.
https://x.com/narendramodi/status/1898214398881128825
ಅನೇಕ ಪಂದ್ಯಾವಳಿಗಳಲ್ಲಿ ನನ್ನ ಯಶಸ್ಸು ಇದನ್ನು ಸಾಬೀತುಪಡಿಸುತ್ತದೆ. ಆದರೆ ಇನ್ನೂ ಹೆಚ್ಚಿನದನ್ನು ಸಾಧಿಸಬೇಕಿದೆ. ನಾನು ಎಲ್ಲಾ ಮಹಿಳೆಯರಿಗೆ, ವಿಶೇಷವಾಗಿ ಯುವತಿಯರಿಗೆ ಒಂದು ಸಂದೇಶವನ್ನು ನೀಡಲು ಬಯಸುತ್ತೇನೆ. ಅಡೆತಡೆಗಳು ಏನೇ ಇರಲಿ, ನಿಮ್ಮ ಕನಸುಗಳನ್ನು ಅನುಸರಿಸಿ. ನಿಮ್ಮ ಉತ್ಸಾಹವು ನಿಮ್ಮ ಯಶಸ್ಸಿಗೆ ಶಕ್ತಿಯನ್ನು ನೀಡುತ್ತದೆ ಎಂದು ಅವರು ಪ್ರಧಾನಿ ಮೋದಿ ಅವರ ಎಕ್ಸ್ ಖಾತೆಯಲ್ಲಿ ವೈಶಾಲಿ ಬರೆದಿದ್ದಾರೆ.
‘ಪೋಷಕರು ಮತ್ತು ಒಡಹುಟ್ಟಿದವರು ಹೆಣ್ಣು ಮಕ್ಕಳನ್ನು ಬೆಂಬಲಿಸಬೇಕು. ಅವರ ಸಾಮರ್ಥ್ಯಗಳ ಮೇಲೆ ನಂಬಿಕೆಯಿಡಿ. ಆಗ ಅವರು ಅದ್ಭುತ ಸಾಧನೆಗಳನ್ನು ಮಾಡುತ್ತಾರೆ. ನನ್ನ ಜೀವನದಲ್ಲಿ ಪೋಷಕರಾದ ರಮೇಶ್‌ಬಾಬು ಮತ್ತು ನಾಗಲಕ್ಷ್ಮಿ ಅವರು ನಂಬಿಕೆ ಇಟ್ಟ ಕಾರಣ ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ಕಾರಣ. ಮನೆಯಲ್ಲೇ ಬೆಂಬಲ ಸಿಗದಿದ್ದರೆ ಆಗ ಯಾವ ಹೆಣ್ಣು ಕೂಡ ಸಾಧನೆ ಮಾಡುಲು ಅಸಾಧ್ಯ’ ಎಂದರು.