ಹೊಸದಿಗಂತ ವರದಿ, ಮಂಗಳೂರು:
ಬಂಟ್ವಾಳದ ಫರಂಗಿಪೇಟೆ ಸಮೀಪದ ಅಮ್ಮೆಮಾರಿನ ಕಿದೆಬೆಟ್ಟು ಪದ್ಮನಾಭ ಮಡಿವಾಳ ಅವರ ಪುತ್ರ ದಿಗಂತ್ (17) ಕೊನೆಗೂ ಶನಿವಾರ ಉಡುಪಿ ನಗರದ ಡಿ-ಮಾಟ್೯ ಸೂಪರ್ ಬಜಾರ್ ನಲ್ಲಿ ಪತ್ತೆಯಾಗಿದ್ದು, 12 ದಿನಗಳ ಕಾಲ ಕಂಗಾಲಾಗಿದ್ದ ಅತನ ಪೋಷಕರು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ದಿಗಂತ್ ನಾಪತ್ತೆ ಪ್ರಕರಣ ಕರಾವಳಿ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡಿದ್ದಲ್ಲದೆ ಇಡೀ ಪ್ರಕರಣದ ಸುತ್ತ ನಾನಾ ರೀತಿಯ ಉಹಾಪೋಹ, ದುಗುಡ ಫರಂಗೀಪೇಟೆ ಸಹಿತ ಜಿಲ್ಲೆಯಲ್ಲಿಯೇ ಅವರಿಸಿತ್ತು. ಇದೀಗ ಈ ನಿಗೂಢತೆಗೆ ತೆರೆ ಬಿದ್ದಿದೆ.
ಪ್ಲ್ಯಾಶ್ ಬ್ಯಾಕ್
ದಿಗಂತ್ ಮನೆ ಸಮೀಪವಿರುವ ಫರಂಗಿಪೇಟೆಯ ಶ್ರೀ ಅಂಜನೇಯ ದೇವಸ್ಥಾನಕ್ಕೆ ಭಜನೆಗಾಗಿ ಪ್ರತಿನಿತ್ಯ ತೆರಳುವಂತೆ ಫೆ.25 ರಂದು ಕೂಡ ಸಂಜೆ ಮನೆಯಿಂದ ತೆರಳಿದ್ದಾನೆ. ಭಜನೆ ಮುಗಿಸಿ ಬರಬೇಕಾದ ಸಮಯಕ್ಕೆ ಈತ ಮನೆ ತಲುಪಿಲ್ಲ, ಸಹಜವಾಗಿಯೇ ಮನೆಮಂದಿಯಲ್ಲಿ ಆತಂಕ ಶುರುವಾಗಿದೆ.ಈತನ ತಂದೆ ಸಹಿತ ಮನೆಯ ಇತರೆ ಸದಸ್ಯರು,ಸಂಘಪರಿವಾರ ಸಂಘಟನೆಯ ಸ್ಥಳೀಯ ಕಾರ್ಯಕರ್ತರು ರಾತ್ರಿ ಇಡೀ ಹುಡುಕಾಡಿದ್ದಾರೆ. ಆದರೆ ದಿಗಂತ್ ನ ಸುಳಿವು ಸಿಕ್ಕಿರಲಿಲ್ಲ.ಕೊನೆಗೆ ರೈಲ್ವೇ ಹಳಿಯಲ್ಲಿ ಮೊಬೈಲ್ ಮತ್ತು ಚಪ್ಪಲಿ ದೊರೆತಿತ್ತು.ಒಂದು ಚಪ್ಪಲಿಯಲ್ಲಿ ಮೂರು ಹನಿ ರಕ್ತ ಕಂಡುಬಂದಿತ್ತು. ಇದರಿಂದಾಗಿ ಪೋಷಕರು ಮತ್ತಷ್ಟು ಕಗಾಲಾಗಿದ್ದರು.
ಇದಾದ ಬೆನ್ನಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ನುರಿತ ಅಧಿಕಾರಿಗಳನ್ನೊಳಗೊಂಡ7 ತಂಡವನ್ನು ರಚಿಸಿ ದಿಗಂತ್ ನ ಪತ್ತೆಕಾರ್ಯ ಆರಂಭಿಸಿದ್ದರು.ಇದರ ನಡುವೆ ಇಂದು ಉಡುಪಿಯ ಡಿಮಾಟ್ ೯ನಲ್ಲಿ ಯುವಕ ಪ್ರತ್ಯಕ್ಷವಾಗಿದ್ದಾನೆ.
ಉಡುಪಿ ಪರಿಸರದಲ್ಲಿ ಕಾರ್ಯಾಚರಣೆಯಲ್ಲಿದ್ದ ಪುಂಜಾಲಕಟ್ಟೆ ಠಾಣೆಯ ಎಸ್ ಐ ನಂದಕುಮಾರ್ ಮತ್ತವರ ತಂಡ ಡಿಮಾಟ್೯ನ್ನು ಸುತ್ತವರಿದು ದಿಗಂತ್ ನನ್ನು ವಶಕ್ಕೆ ಪಡೆದು ಸುರಕ್ಷಿತವಾಗಿ ಕರೆ ತಂದು, ಜಿಲ್ಲಾ ಎಸ್ಪಿ ಯತೀಶ್ ಅವರ ಮುಂದೆ ಹಾಜರುಪಡಿಸಿದ್ದಾರೆ.
ತಾಯಿಗೂ ಕರೆ
ನಾನು ಸ್ವಯಂಪ್ರೇರಿತವಾಗಿ ನಾಪತ್ತೆಯಾಗುವ ಹುಡುಗ ಅಲ್ಲ, ನನಗೇನು ತೊಂದರೆಯಾಗಿಲ್ಲ ನನ್ನನ್ನು ಯಾರೋ ಹೊತ್ತುಕೊಂಡು ಹೋಗಿದ್ದಾರೆ, ಎಲ್ಲವನ್ನೂ ನಾನು ಬಂದು ಹೇಳುತ್ತೇನೆ ಎಂದಿದ್ದಾನೆ ಎಂದು ಅತನ ತಾಯಿ ಸುಜಾತ ಅವರು ಸುದ್ದಿಗಾರರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಎಸ್ಪಿಯಿಂದ ವಿಚಾರಣೆ
ದಿಗಂತ್ ನಾಪತ್ತೆಯ ಹಿಂದೆ ಅನೇಕ ಊಹಾಪೋಹಗಳು ಹಬ್ಬಿತ್ತಲ್ಲದೆ ಹೊರಜಿಲ್ಲೆಗೂ ತೆರಳಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ತನಿಖೆಯು ನಡೆದಿತ್ತಾದರೂ ಅತನ ಸುಳಿವು ಸಿಕ್ಕಿರಲಿಲ್ಲ. ಆದರೆ ಕರಾವಳಿಯ ಜಿಲ್ಲೆಯ ಉಡುಪಿಯಲ್ಲೇ ಪತ್ತೆಯಾಗಿರುವುದು ಕೂಡ ಹಲವು ಅನುಮಾನಗಳು ಹುಟ್ಟಿಕೊಂಡಿದೆ.
ದಿಗಂತ್ ನಾಪತ್ತೆಯಾದ ಹಿನ್ನಲೆಯಲ್ಲಿ ಪ್ರಕರಣದ ತನಿಖೆಯ ಮೇಲುಸ್ತುವಾರಿಯನ್ನು ಎಸ್ಪಿ ಯತೀಶ್ ಅವರೇ ವಹಿಸಿದ್ದರಿಂದ ಇದೀಗ ಪತ್ತೆಯಾದ ದಿಗಂತ್ ನನ್ನು ಅವರ ಮುಂದೆ ಹಾಜರುಪಡಿಸಲಾಗಿದ್ದು, ಅತನ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಬಳಿಕ ನ್ಯಾಯಧೀಶರ ಮುಂದೆ ಹಾಜರುಪಡಿಸಿ ರಿಮಾಂಡ್ ಹೋಂಗೆ ಸೇರಿಸುವ ಸಾಧ್ಯತೆ ಇದೆಯೆನ್ನಲಾಗಿದೆ, ಹೈಕೋಟ್೯ ನಲ್ಲಿ ಹೇಬಿಯಸ್ ಕಾರ್ಫಸ್ ಅರ್ಜಿಯು ಸಲ್ಲಿಕೆಯಾಗಿದ್ದರಿಂದ ಮಾ. 12 ರ ಒಳಗಾಗಿ ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸಬೇಕಾಗಿದ್ದರಿಂದ ಈತನನ್ನು ಹೈಕೋಟ್೯ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.