ಹೊಸದಿಗಂತ ವರದಿ, ಚಿಕ್ಕಮಗಳೂರು :
ಎಲ್ಲವೂ ಅಂದುಕೊಂಡಂತೆ ಆದರೆ ನವೆಂಬರ್ ಅಂತ್ಯದ ವೇಳೆಗೆ ಬಹುನಿರೀಕ್ಷೆಯ ಮಂಗಳೂರು-ಮಡ್ಗಾಂವ್ ನಡುವೆ ‘ವಂದೇ ಭಾರತ್ ರೈಲು ಸಂಚಾರ ಆರಂಭಿಸಲಿದೆ. ಇದು ಸಾಧ್ಯವಾದರೆ ಕೇವಲ 4.35 ತಾಸಿನಲ್ಲಿ ಪ್ರಯಾಣಿಕರು ಮಡ್ಗಾಂವ್ ತಲುಪಬಹುದು. ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅವರ ಶತಪ್ರಯತ್ನದಿಂದಾಗಿ ಈ ಸೇವೆ ಸಾಧ್ಯವಾಗುತ್ತಿದ್ದು, ಈ ರೈಲು ಪ್ರಯಾಣಕ್ಕೆ ದಿನಗಣನೆ ಆರಂಭವಾಗಿದೆ.
ಇದೇ ವೇಳೆ ಮಂಗಳೂರು-ಬೆಂಗಳೂರು ಮಧ್ಯೆಯೂ ವಂದೇ ಭಾರತ್ ರೈಲು ಓಡಾಟಕ್ಕೆ ಸಿದ್ಧತೆ ನಡೆಯುತ್ತಿದೆ. ಈ ವಿಚಾರವನ್ನು ಸ್ವತಃ ನಳಿನ್ ಕುಮಾರ್ ಅವರು ತಮ್ಮ ಎಕ್ಸ್ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಂಗಳೂರು-ಗೋವಾ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವಂತೆ ಸಂಸದ ನಳಿನ್ ಕುಮಾರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸೆಪ್ಟೆಂಬರ್‌ನಲ್ಲಿ ಮನವಿ ಸಲ್ಲಿಸಿದ್ದರು. ಆಗ ಸಚಿವರು ಅಕ್ಟೋಬರ್ ಅಂತ್ಯದೊಳಗೆ ವಂದೇ ಭಾರತ್ ರೈಲು ಸಂಚಾರದ ಭರವಸೆ ನೀಡಿದ್ದರು. ಈಗಾಗಲೇ ಕೇರಳದ ತಿರುವನಂತಪುರಂ-ಕಾಸರಗೋಡು ನಡುವೆ ವಂದೇ ಭಾರತ್ ಎರಡು ರೈಲುಗಳು ನಿತ್ಯ ಸಂಚರಿಸುತ್ತಿದೆ. ಹೀಗಾಗಿ ಮಂಗಳೂರು ಸೆಂಟ್ರಲ್‌ನಿಂದ ವಂದೇ ಭಾರತ್ ರೈಲು ಆರಂಭಿಸುವಂತೆ ಪ್ರಮುಖವಾಗಿ ರೈಲ್ವೆ ಸಂಘಟನೆಗಳು ಬೇಡಿಕೆ ಸಲ್ಲಿಸಿದ್ದವು.
4.35 ಗಂಟೆ ಪ್ರಯಾಣ ಅವಧಿ
ಪ್ರಸ್ತಾವಿತ ಮಂಗಳೂರು-ಮಡ್ಗಾಂವ್ ವಂದೇ ಭಾರತ್ ರೈಲಿನ ಪ್ರಯಾಣ ಅವಧಿ 4 ಗಂಟೆ 35 ನಿಮಿಷ ಇರಲಿದೆ. ಈ ರೈಲು 315 ಕಿ.ಮೀ. ದೂರವನ್ನು ಗಂಟೆಗೆ 68.7 ಕಿ.ಮೀ. ವೇಗದಲ್ಲಿ ಕ್ರಮಿಸಲಿದೆ. ಲಭ್ಯ ಮಾಹಿತಿ ಪ್ರಕಾರ ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 8.30ಕ್ಕೆ ಹೊರಟು ಮಧ್ಯಾಹ್ನ 1.05 ಗಂಟೆಗೆ ಮಡ್ಗಾಂವ್ ತಲುಪಲಿದೆ. ಮಡ್ಗಾಂವ್‌ನಿಂದ ಸಂಜೆ 6.10ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ವಂದೇ ಭಾರತ್ ರೈಲಿನ ಶುಚಿತ್ವಕ್ಕೆ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ರತ್ಯೇಕ
ಸಿಬ್ಬಂದಿ ಆಯೋಜಿಸಲಾಗಿದೆ. ಇದಕ್ಕೆಂದೇ ತರಬೇತುಗೊಂಡ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಎರಡು ತಿಂಗಳ ಹಿಂದೆಯೇ ಈ ನೇಮಕಾತಿ ನಡೆದಿದೆ.
ಬೆಂಗಳೂರಿಗೆ ವಂದೇ ಭಾರತ್!
ಮಂಗಳೂರು-ಬೆಂಗಳೂರು ಮಧ್ಯೆಯೂ ವಂದೇ ಭಾರತ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವಾಲಯ ಅನುಮತಿ ನೀಡಿದೆ. ಸಾಮಾನ್ಯವಾಗಿ ವಂದೇ ಭಾರತ್ ರೈಲು ಸಂಚಾರಕ್ಕೆ ದ್ವಿಹಳಿ, ವಿದ್ಯುದೀಕರಣ ಆಗಬೇಕು. ಆದರೆ ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಮಂಗಳೂರಿನಿಂದ ಪುತ್ತೂರು ವರೆಗೆ ರೈಲು ಹಳಿ ವಿದ್ಯುದೀಕರಣ ಆಗಿದೆ. ಪುತ್ತೂರಿನಿಂದ ಸುಬ್ರಹ್ಮಣ್ಯ ಮಾರ್ಗ(ನೆಟ್ಟಣ) ವರೆಗೆ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದು, ಡಿಸೆಂಬರ್ ಒಳಗೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಆದರೆ ಸುಬ್ರಹ್ಮಣ್ಯ ಮಾರ್ಗದಿಂದ ಸಕಲೇಶಪುರ-ಹಾಸನ ವರೆಗೆ ವಿದ್ಯುದೀಕರಣ ಬಾಕಿ ಇದೆ. ಅಲ್ಲದೆ ಸಿರಿಬಾಗಿಲು, ದೋಣಿಗಲ್‌ಗಳಲ್ಲಿ ಸುರಂಗ ಮಾರ್ಗ ವಿದ್ಯುದೀಕರಣದ ದೊಡ್ಡ ಸವಾಲು ಇದೆ. ಇವೆಲ್ಲದವರ ನಡುವೆ ವಂದೇ ಭಾರತ್ ರೈಲು ಮಂಗಳೂರು-ಬೆಂಗಳೂರು ನಡುವೆ ಸಂಚರಿಸಲಿದೆ. ರೈಲ್ವೆ ಇಲಾಖೆಯೇ ಈ ಕುರಿತು ಸಂಸದರಿಗೆ ಮಾಹಿತಿ ನೀಡಿದ್ದು, ಮುಂದಿನ ವರ್ಷಾರಂಭದಲ್ಲಿ ವಂದೇ ಭಾರತ್ ಸಂಚರಿಸುವ ಸಾಧ್ಯತೆ ಇದೆ.