ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಚರ್ಚಿತ ಜ್ಞಾನವಾಪಿ ಪ್ರಕರಣವನ್ನು ಜಿಲ್ಲಾ ಕೋರ್ಟ್ ಗೆ ವರ್ಗಾಯಿಸಿ ಹಾಗೂ ಪ್ರಕರಣದ ವಿಚಾರಣೆಯನ್ನು ಹಿರಿಯ ನ್ಯಾಯಾಧೀಶರು ಮಾಡಬೇಕೆಂದು ಸುಪ್ರಿಂ ಕೋರ್ಟ್ ಶುಕ್ರವಾರ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಇಂದು ವಾರಾಣಸಿ ಜಿಲ್ಲಾ ನ್ಯಾಯಾಲಯವು ಆಲಿಸಲಿದೆ.
16 ನೇ ಶತಮಾನದಲ್ಲಿ ದೇವಾಲಯವನ್ನು ಕೆಡವಲಾಯಿತು ಎಂದು ಹಿಂದುಗಳು ಹೇಳುತ್ತಿದ್ದರೆ ಮುಸ್ಲಿಮರು 1991ರ ಪೂಜಾ ಸ್ಥಳಗಳ ಕಾಯ್ದೆಗೆ ಜೋತು ಬಿದ್ದು ಪ್ರಕರಣವನ್ನು ಕೈ ಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಹಿರಿಯ ಜಿಲ್ಲಾ ನ್ಯಾಯಾಧೀಶರಾದ ಅಜಯ್ ಕೃಷ್ಣ ವಿಶ್ವೇಶ ಅವರು ಪ್ರಕರಣವನ್ನು ಆಲಿಸಲಿದ್ದು ವಿಚಾರಣೆಯ ಸಂದರ್ಭದಲ್ಲಿ ಕೇವಲ ವಕೀಲರು ಮಾತ್ರ ನ್ಯಾಯಾಲಯದ ಮುಂದೆ ಹಾಜರಿರುವಂತೆ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಸಲ್ಲಿಕೆಯಾಗಿರುವ ಮೂರು ಅರ್ಜಿಗಳಲ್ಲಿ ಎರಡು ಹಿಂದುಗಳ ಪರವಾಗಿ ಸಲ್ಲಿಕೆಯಾಗಿದ್ದರೆ ಒಂದು ಮುಸ್ಲಿಮರಿಂದ ಸಲ್ಲಿಕೆಯಾಗಿದೆ. ಈ ಅರ್ಜಿಗಳಲ್ಲಿ ಉಲ್ಲೇಖಿತ ಅಂಶಗಳು ಹೀಗಿವೆ
- ಹಿಂದೂಗಳ ಅರ್ಜಿಯಲ್ಲೇನಿದೆ?
-ಮಾತೆ ಶೃಂಗಾರ ಗೌರಿಯ ನಿತ್ಯ ಪೂಜೆಗೆ ಅವಕಾಶ ಕಲ್ಪಿಸಬೇಕು
– ವಝುಖಾನಾದಲ್ಲಿ ಪತ್ತೆಯಾದ ಶಿವಲಿಂಗಕ್ಕೂ ಪೂಜೆ ಸಲ್ಲಿಸಲು ಅನುಮತಿ ನೀಡಬೇಕು
-ಶಿವಲಿಂಗ ಪತ್ತೆಯಾಗಿರುವ ಅಡಿಕೋಣೆಗೆ ಹೋಗುವ ಹಾದಿಯಲ್ಲಿರುವ ಅವಶೇಷಗಳನ್ನು ತೆಗೆಯುವುದು
-‘ಶಿವಲಿಂಗ’ದ ಉದ್ದ, ಅಗಲ ತಿಳಿಯಲು ಸಮೀಕ್ಷೆ ನಡೆಸಲು ಅನುಮತಿ ನೀಡಬೇಕು
– ವಝುಖಾನಾಗೆ ಪರ್ಯಾಯ ವ್ಯವಸ್ಥೆ ಒದಗಿಸುವುದು - ಮುಸ್ಲಿಮರ ಅರ್ಜಿಯಲ್ಲೇನಿದೆ?
– ವಝುಖಾನಾವನ್ನು ಸೀಲ್ ಮಾಡಬಾರದು
-1991 ಪೂಜಾಸ್ಥಳಗಳ ಕಾಯ್ದೆಯ ಅಡಿಯಲ್ಲಿ ಪ್ರಸ್ತುತ ಪ್ರಕರಣವನ್ನು ಪರಿಗಣಿಸಬೇಕು
ಸ್ಥಳದ ಸ್ವರೂಪ ನಿರ್ಣಯವು 1991ರ ಕಾಯ್ದೆಯ ಉಲ್ಲಂಘನೆಯಲ್ಲ ಎಂದಿರುವ ಸುಪ್ರಿಂ ಕೋರ್ಟ್ ಪ್ರಕರಣವನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿದ್ದಲ್ಲದೇ ಪ್ರಕರಣವನ್ನು 8 ವಾರಗಳ ಒಳಗಾಗಿ ಮುಗಿಸುವಂತೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅಜಯ್ ಕೃಷ್ಣ ವಿಶ್ವೇಶ ಅವರು ಪ್ರಕರಣದ ವಿಚಾರಣೆ ಪ್ರಾರಂಭಿಸಿದ್ದಾರೆ.