ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣನ ಅರ್ಭಟ ಜೋರಾಗಿದೆ. ಸಂಜೆವರೆಗೂ ಉರಿ ಬಿಸಿಲಿಗೆ ಹೈರಾಣಾದ ಬೆಂಗಳೂರಿನ ಜನರಿಗೆ ಸಂಜೆ ಹೊತ್ತಿಗೆ ಮಳೆರಾಯ ತಂಪೆರೆದಿದ್ದಾನೆ.
ನಗರದ ಹಲವೆಡೆ ಅಧಿಕ ಮಳೆಯಾಗುತ್ತಿದ್ದು, ಇನ್ನೂ ಕೆಲವೆಡೆ ಮೋಡ ಕವಿದ ವಾತಾವರಣವಿದೆ.ರಾತ್ರಿ ವೇಳೆಗೆ ಮಳೆ ಇನ್ನಷ್ಟು ಕಡೆ ಸುರಿಯುವ ಸಾಧ್ಯತೆ ಇದೆ.
ಬೆಂಗಳೂರಿನ ಹಲವೆಡೆ ಮುಂದಿನ 24 ಗಂಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಂಜೆ ಮಳೆಯಾಗುತ್ತಿದ್ದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಇಂದು ಬಸವನಪುರ, ರಾಮಮೂರ್ತಿ ನಗರ, ಯಲಹಂಕ, ಜಕ್ಕೂರು, ಕಾಡುಗೋಡಿ ವ್ಯಾಪ್ತಿಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಲಿದೆ. ಇನ್ನುಳಿದಂತೆ ದಾಸರಹಳ್ಳಿ ವಲಯ, ಪೂರ್ವ ವಲಯ, ದಕ್ಷಿಣ ವಲಯ, ಮಹದೇವಪುರ ವಲಯ, ಪಶ್ಚಿಮ ವಲಯ, ಬೊಮ್ಮನಹಳ್ಳಿ ವಲಯ, ಆರ್ ಆರ್ ನಗರ ವಲಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ.
ಪ್ರಮುಖವಾಗಿ ಮಾರತಹಳ್ಳಿ, ವರ್ತೂರು, ಬೊಮ್ಮನಹಳ್ಳಿ, ನಾಗರಬಾವಿ, ಹೆಚ್‌ಎಎಲ್, ದೊಮ್ಮಲೂರು, ಗಾಲಿ ಆಂಜನೇಯ ದೇಗುಲ, ಆರ್ ಆರ್ ನಗರ, ಕೆಂಗೇರಿ, ಪೀಣ್ಯ, ಪುಲಕೇಶಿನಗರ, ಯಶವಂತಪುರ, ಬಾಣಸವಾಡಿ ಈ ಎಲ್ಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ.ನವೆಂಬರ್ 4 ರ ರಾತ್ರಿಯೇ ಭಾರೀ ಮಳೆಯಾಗಲಿದ್ದು, ನವೆಂಬರ್ 5 ರಂದು ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.