ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ವಿವಿಧೆಡೆ ವರುರ್ಣಾಭಟ ಜೋರಾಗಿದೆ. ಚಿಕ್ಕಮಗಳೂರಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.
ಮಳೆಗೆ ಬೃಹತ್ ಗಾತ್ರದ ಮರವೊಂದು ರಸ್ತೆ ಬದಿ ನಡೆದು ಹೋಗುತ್ತಿದ್ದ ಮಹಿಳೆಯ ಮೇಲೆ ಬಿದ್ದಿದೆ. ಮರದ ಅಡಿ ಸಿಲುಕಿದ ಮಹಿಳೆ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಸವಿತಾ (48) ಮೃತ ದುರ್ದೈವಿ. ಚಿಕ್ಕಮಗಳೂರಿನ ಎನ್‌ಆರ್ ಪುರ ತಾಲೂಕಿನ ಕಟ್ಟಿಮನಿ ಗ್ರಾಮದ ಬಳಿ ಘಟನೆ ನಡೆದಿದೆ.
ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರಿನ ಮೇಲೂ ಮರ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಎನ್ ಆರ್ ಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಚಿಕ್ಕಮಗಳೂರು ಮಲೆನಾಡಿನ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನ ಶಿರವಾಸೆ, ಮುತ್ತೋಡಿ, ಮಲಂದೂರು ಸುತ್ತಮುತ್ತ ಗುಡುಗು, ಸಿಡಿಲು ಬಿರುಗಾಳಿ ಸಹಿತ ನಿರಂತರ ಮಳೆಯಾಗುತ್ತಿದೆ. ಶಿರವಾಸೆ ಗ್ರಾ.ಪಂ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಕೂಲಿ ಕಾರ್ಮಿಕರು ಪರದಾಟ ಅನುಭವಿಸುತ್ತಿದ್ದಾರೆ.
ತರೀಕೆರೆ, ಅಜ್ಜಂಪುರ ತಾಲೂಕಿನ ಹಲವು ಭಾಗಗಳಲ್ಲೂ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರದ ಕೋಟೆ, ಹಿರೇಮಗಳೂರು, ಜಯನಗರ ಶಂಕರಪುರ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಳಸಾಪುರ, ಬೆಳವಾಡಿ, ಮರ್ಲೆ, ತಿಳಿದಂತೆ ಹಲವು ಗ್ರಾಮಗಳಲ್ಲಿ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.