ಫೆ.27 ರಂದು ‘ವಸುಂದರ ರಾಷ್ಟ್ರೀಯ ನೃತ್ಯೋತ್ಸವ’ ಕಾರ್ಯಕ್ರಮ

ದಿಗಂತ ವರದಿ ಹುಬ್ಬಳ್ಳಿ:

ಕಲಾ ಸುಜಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಫೆ.27 ರಂದು ಸಂಜೆ 5 ಗಂಟೆಗೆ ನೃತ್ಯ ಸುಂದರ ವಸುಂದರ ರಾಷ್ಟ್ರೀಯ ನೃತ್ಯೋತ್ಸವವನ್ನು ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ‌ ಆಯೋಜಿಸಲಾಗಿದೆ ಎಂದು ಕಲಾ ಸುಜಯ ಕಮಿಟಿಯ ಸದಸ್ಯೆ ನಯನಾ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 7 ವರ್ಷಗಳಿಂದ ಹುಬ್ಬಳ್ಳಿ, ಲಕ್ಷ್ಮೇಶ್ವರ ಮತ್ತು ಬೆಂಗಳೂರಿನಲ್ಲಿ ಭರತನಾಟ್ಯ ತರಗತಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಕಲಾ ಸುಜಯ. ಪ್ರತಿ ವರ್ಷ ನೃತ್ಯ ಸುಂದರ ವಸುಂದರ ನೃತ್ಯ ಹಬ್ಬವನ್ನು ಆಯೋಜಿಸುತ್ತಾ ಬರುತ್ತಿದೆ. ಅದರಂತೆ ಈ ವರ್ಷವು ಪುರಂದರ ದಾಸರ ಗೌರವಾರ್ಥ ಪುರಂದರ ನಮನ ನೃತ್ಯ ರೂಪಕ ಹಮ್ಮಿಕೊಳ್ಳಲಾಗಿದೆ. ಇದಲ್ಲದೇ ಜಲ ಸಂಪನ್ಮೂಲಗಳ ರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಗಂಗಾಗಮನ ನೃತ್ಯ ರೂಪಕ ಪ್ರದರ್ಶನಗೊಳಲಿದೆ. ಇದಕ್ಕೆ ಶತಾವಧಾನಿ ಆರ್ ಗಣೇಶ ರಚಿಸಿರುವ ಸಾಹಿತ್ಯವಿದ್ದು, ವಿದ್ವಾನ್ ಸುಜಯ ಶಾನಭಾಗ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದೇ ವೇಳೆ ಡಾ.ವಸುಂಧರಾ ದೊರೆಸ್ವಾಮಿ ನೃತ್ಯ ಸಂಯೋಜನೆ ಮಾಡಿರುವ ವಿದ್ಯುನ್ ಮದನಿಕಾ ನೃತ್ಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಇನ್ನೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗಂಗಾವತಿ ಪ್ರಾಣೇಶ, ಗುಜ್ಜಾಡಿ ಸ್ವರ್ಣ ಜ್ಯುವೆಲರ್ಸ್ ನ ಗುಜ್ಜಾಡಿ ಗೋಪಾಲಕೃಷ್ಣ ನಾಯಕ ಸೇರಿದಂತೆ ಮುಂತಾದ ಗಣಮಾನ್ಯರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಸುಜಯ ಶಾನಭಾಗ, ಡಾ. ವಸುಂಧರಾ ದೊರೆಸ್ವಾಮಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!