ವೀರಾಜಪೇಟೆ: ಪ.ಪಂ. ನಿರ್ಲಕ್ಷ್ಯ ಧೋರಣೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಹೊಸದಿಗಂತ ವರದಿ, ಮಡಿಕೇರಿ
ವೀರಾಜಪೇಟೆ ಪಟ್ಟಣ ಪಂಚಾಯತ್ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ವಿವಿಧ ಸಂಘಟನೆಗಳು ಪ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದವು.
ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಘಟಕ, ಡಿ.ವೈ.ಎಫ್.ಐ ಸಂಘಟನೆಯ ವೀರಾಜಪೇಟೆ ಘಟಕ ಮತ್ತು ನಾಗರಿಕ ಸಮಿತಿಯ ಪ್ರಮುಖರು ಪ್ರತಿಭಟನೆ ನಡೆಸಿ ಪ.ಪಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಾಗರಿಕ ಸಮಿತಿಯ ಸಂಚಾಲಕ ಡಾ. ಇ.ಆರ್.ದುರ್ಗಾಪ್ರಸಾದ್ ಮಾತನಾಡಿ, ಪ.ಪಂ ನೀರಿನ ದರ ಮತ್ತು ವಾಣಿಜ್ಯ ಕರಗಳನ್ನು ಏರಿಕೆ ಮಾಡಿದೆ. ಆದರೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಡಿಲ್ಲವೆಂದು ಆರೋಪಿಸಿದರು.
ನಗರದ ಎಲ್ಲಾ ಪ್ರದೇಶಗಳಲ್ಲಿ ಮಾಂಸದಂಗಡಿಗಳಿಗೆ ಮನ ಬಂದಂತೆ ಪರವಾನಗಿ ನೀಡಿ ನಗರದ ಸ್ವಾಸ್ಥ್ಯವನ್ನು ಕೆಡಿಸಿದೆ. ಸರ್ಕಾರವು ಕೋಟ್ಯಂತರ ವೆಚ್ಚದಲ್ಲಿ ಹಸಿ ಮೀನು ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿದ್ದರೂ, ಮೂಲಭೂತ ಸೌಕರ್ಯ ಒದಗಿಸದೆ ಬೆರಳಣಿಕೆಯೆಷ್ಟು ಮಳಿಗೆಗಳು ವಹಿವಾಟು ಮಾಡುತ್ತಿವೆ. ಇದರಿಂದ ಸರ್ಕಾರದ ಹಣ ಪೋಲಾಗಿದೆಯೆಂದು ಟೀಕಿಸಿದ ಅವರು, ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಬೀದಿ ದೀಪ, ಒಳಚರಂಡಿ ವ್ಯವಸ್ಥೆ ಮತ್ತಿತರ ಸಮಸ್ಯೆಗಳನ್ನು ನಿವಾಸಿಗಳು ಎದುರಿಸುತ್ತಿದ್ದಾರೆ. ಈ ಬಗ್ಗೆ ಅರಿವಿದ್ದರೂ ಪ.ಪಂ. ತಟಸ್ಥ ಧೋರಣೆ ತಾಳಿದೆ ಎಂದು ದೂರಿದರು.
ಡಿ.ವೈ.ಎಫ್.ಐ. ಪಕ್ಷದ ವೀರಾಜಪೇಟೆ ಶಾಖೆಯ ಪ್ರಮುಖರಾದ ರಮೇಶ್ ಶಾಜಿ, ನಗರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪಿಸಿದರು.
ನಾಗರಿಕ ಸಮಿತಿಯ ನಾಣಯ್ಯ, ವಕೀಲ ಲೋಕನಾಥ ಹಾಗೂ ಕ.ರ.ವೇ.ಯ ಪ್ರಮುಖರಾದ ಬಾವ ಮಾಲ್ದಾರೆ ಮಾತನಾಡಿದರು.
ಪ.ಪಂ ಅಧ್ಯಕ್ಷೆ ಟಿ.ಆರ್.ಸುಶ್ಮಿತಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ ಜೂನಾ ಹಾಗೂ ಪ.ಪಂ ಮುಖ್ಯಾಧಿಕಾರಿ ಚಂದ್ರಕುಮಾರ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!