ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಯೊಬ್ಬರಿಗೂ ಆಕರ್ಷಕವಾಗುತ್ತಿರುವುದು ಓಟ್ಸ್…ದೇಹಾರೋಗ್ಯವನ್ನು ಕಾಪಾಡುವುದರೊಂದಿಗೆ, ತೂಕ ನಷ್ಟಕ್ಕೂ ಇದು ಸಹಕಾರಿ. ಡಯಟ್ ಮಾಡುವವರು ಓಟ್ಸ್ ಇಷ್ಟಪಟ್ಟು ತಿನ್ನುತ್ತಾರೆ. ತೂಕ ಇಳಿಸುವ ಆಶೆ ಹೊಂದಿದವರು ಓಟ್ಸ್ ಮೊರೆಹೋಗುತ್ತಿದ್ದಾರೆ. ಬೆಳಗ್ಗಿನ ಉಪಾಹಾರವಾಗಿ, ಮಧ್ಯಾಹ್ನದ ಊಟವಾಗಿ, ರಾತ್ರಿಯ ಆಹಾರವಾಗಿ ಓಟ್ಸ್ ಬಳಕೆಯಲ್ಲಿದೆ.
ತರಕಾರಿಗಳನ್ನು ಹಾಕಿದ ಮಸಾಲಾ ಓಟ್ಸ್ ಹೀಗೆ ಮಾಡಿ. ಇದು ಖಂಡಿತ ದೇಹಾರೋಗ್ಯ ಹೆಚ್ಚಿಸುವುದಲ್ಲದೆ ಬೆಳಗಿನ ತಿಂಡಿ ಬೇಗ ಆಗುತ್ತದೆ.
ಬೇಕಾದ ಪದಾರ್ಥಗಳು: ಓಟ್ಸ್, ಕ್ಯಾರೆಟ್, ಹಸಿರು ಬಟಾಣಿ, ಮೆಣಸಿನ ಹುಡಿ, ಕೊತ್ತಂಬರಿ ಹುಡಿ, ಅರಶಿನ ಹುಡಿ, ಗರಂ ಮಸಾಲಾ ಹುಡಿ, ಉಪ್ಪು, ಇಂಗು, ಈರುಳ್ಳಿ, ಬೀನ್ಸ್, ಕ್ಯಾಪ್ಸಿಕಂ, ಹಸಿಮೆಣಸಿನಕಾಯಿ, ಎಣ್ಣೆ.
ಒಲೆಯ ಮೇಲೆ ಬಾಣಲೆ ಬಿಸಿಗಿಡಿ. ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಇಂಗು ಮತ್ತು ಕತ್ತರಿಸಿದ ಹಸಿ ಮೆಣಸಿನಕಾಯಿ ಸೇರಿಸಿ ಹುರಿಯಿರಿ. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂಗಳನ್ನು ಸಣ್ಣದಾಗಿ ಕತ್ತರಿಸಿ ಬಾಣಲೆಗೆ ಹಾಕಿ ಚೆನ್ನಾಗಿ ಮಗುಚಿ. ಬಟಾಣಿ, ಉಪ್ಪು ಸೇರಿಸಿ ಸ್ವಲ್ಪ ಸಮಯ ಫ್ರೈ ಮಾಡಿ. ಮೆಣಸಿನ ಹುಡಿ, ಕೊತ್ತಂಬರಿ ಹುಡಿ, ಅರಶಿನ ಹುಡಿ, ಗರಂ ಮಸಾಲಾ ಹುಡಿ, ಸ್ವಲ್ಪ ನೀರು ಹಾಕಿ ಬೇಯಿಸಿ. ಬೇಯುತ್ತಿದ್ದಂತೆಯೇ ಸ್ವಲ್ಪ ಓಟ್ಸ್ ಸೇರಿಸಿ, ಬೇಯಿಸಿ. ಬಿಸಿ ಬಸಿ ವೆಜಿಟೇಬಲ್ ಮಸಲಾ ಓಟ್ಸ್ ತಿನ್ನಲು ಬಹು ಟೇಸ್ಟಿ!.