ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಪ್ರಸಿದ್ದ ಗಾಯಕಿ ಮೇರಿ ಮಿಲ್ಬೆನ್ ಮಣಿಪುರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಪ್ರತಿಕ್ರಿಯೆಯಾಗಿ ಗುರುವಾರ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ ಬೆನ್ನಲ್ಲೇ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ʻಮಣಿಪುರದ ತಾಯಂದಿರು, ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗೆ ಪ್ರಧಾನಿ ಮೋದಿ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವಿದೆʼ ಎಂದು ಮಿಲ್ ಬೆನ್ ಟ್ವೀಟ್ ಮಾಡಿದ್ದಾರೆ.
ಮುಂದುವರಿದು..ʻಸ್ವತಂತ್ರ ಭಾರತದ ಬಗ್ಗೆ ನಿಜ ಹೇಳಿ..ನನಗೆ ಮೋದಿ ಮೇಲೆ ನಂಬಿಕೆ ಇದೆ. ನಾನು ಅವರಿಗಾಗಿ ಪ್ರಾರ್ಥಿಸುತ್ತಿದ್ದೇನೆ. ತನ್ನ ನಾಯಕನ ಮೇಲೆ ಭಾರತಕ್ಕೂ ವಿಶ್ವಾಸವಿದೆ ಹಾಗೆಯೇ ಅವರು ಯಾವಾಗಲೂ ನಿಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾರೆʼ ಎಂದರು. ಮಿಲ್ಬೆನ್ ಈ ವರ್ಷದ ಜೂನ್ನಲ್ಲಿ ಮೋದಿಯವರ ಅಮೇರಿಕಾ ಭೇಟಿಯ ಸಂದರ್ಭದಲ್ಲಿ ನಮ್ಮ ದೇಶದ ರಾಷ್ಟ್ರಗೀತೆಯನ್ನು ಹಾಡಿ, ಪ್ರಧಾನಿ ಕಾಲಿಗೆ ನಮಸ್ಕರಿಸಿದ್ದರು.
ಅವಿಶ್ವಾಸ ನಿರ್ಣಯಕ್ಕೆ ನಿನ್ನೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಮಣಿಪುರದ ಹಿಂಸಾಚಾರವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸುವುದಾಗಿ ಭರವಸೆ ನೀಡಿದರು.