ಹೊಸದಿಗಂತ ವರದಿ ಬನವಾಸಿ:
ಅಕ್ರಮವಾಗಿ ಗೋವುಗಳನ್ನು ಸಾಗಣೆ ಮಾಡುತ್ತಿದ್ದ ಬೊಲೆರೋ ಫಿಕ್ಆಪ್ ವಾಹನ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಜಾನುವಾರುಗಳು ಸೇರಿ ಇಬ್ಬರು ಗಾಯಗೊಂಡ ಘಟನೆ ಶಿರಸಿ-ಹಾವೇರಿ ರಸ್ತೆಯ ದಾಸನಕೊಪ್ಪ ಸಮೀಪದ ಬೋರನಗುಡ್ಡ ಗ್ರಾಮದ ಭೂತೇಶ್ವರ ದೇವಸ್ಥಾನದ ಬಳಿ ಭಾನುವಾರ ಬೆಳಗಿನ ಜಾವ ನಡೆದಿದೆ.
ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಕ್ರಮವಾಗಿ ಹಾವೇರಿ ಕಡೆಯಿಂದ ಶಿರಸಿ ಕಡೆಗೆ ಗೋವುಗಳನ್ನು ಸಾಗಾಟ ಮಾಡಿಕೊಂಡು ಹೋಗುತ್ತಿದ್ದ ಬೊಲೆರೋ ಫಿಕ್ಆಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮತ್ತೊರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದ 6 ಗೋವುಗಳಲ್ಲಿ 5 ಗೋವುಗಳು ಗಾಯಗೊಂಡಿದ್ದು, ಒಂದು ಗೋವು ಸಾವನ್ನಪ್ಪಿದೆ.
ಬನವಾಸಿ ಪೊಲೀಸ್ ಠಾಣೆಯ ಇ.ಆರ್.ಎಸ್. 112 ವಾಹನ ಸ್ಥಳಕ್ಕೆ ಭೇಟಿ ನೀಡಿ ಗೋವುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.