ಹೊಸದಿಗಂತ ವರದಿ ಅಂಕೋಲಾ:
ಅಕ್ರಮವಾಗಿ ಗೋವಾ ಸಾರಾಯಿ ಸಾಗಿಸುತ್ತಿದ್ದ ಟವೇರಾ ವಾಹನ ತಾಲೂಕಿನ ಸುಂಕಸಾಳ ಕೋಟೇಪಾಲ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಪಲ್ಟಿಯಾಗಿದ್ದು, ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 1.33 ಲಕ್ಷ ಮೌಲ್ಯದ ಗೋವಾ ರಾಜ್ಯದ ವಿವಿಧ ಬ್ರಾಂಡುಗಳ ಸಾರಾಯಿಯನ್ನು ಅಂಕೋಲಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಹೋಗುತ್ತಿದ್ದ ಕೆ.ಎ30 /9353 ನೋಂದಣಿ ಸಂಖ್ಯೆಯ ಟವೇರಾ ವಾಹನ ಸುಂಕಸಾಳ ಬಳಿ ಚರಂಡಿಯಲ್ಲಿ ಪಲ್ಟಿಯಾಗಿದೆ. ಗೋವಾ ರಾಜ್ಯದಲ್ಲಿ ತಯಾರಾದ 39600 ರೂಪಾಯಿ ಮೌಲ್ಯದ 750 ಎಂ.ಎಲ್‌ನ 120 ರಾಯಲ್ ಛಾಲೆಂಜ್ ವಿಸ್ಕಿ ಬಾಟಲಿಗಳು, 35640 ಮೌಲ್ಯದ 750 ಎಂ.ಎಲ್ ನ 108 ರಾಯಲ್ ಸ್ಟಾಗ್ ವಿಸ್ಕಿ ಬಾಟಲಿಗಳು, 57780 ರೂಪಾಯಿ ಮೌಲ್ಯದ 214 ಮೆನಶನ್ ಹೌಸ್ ಬ್ರಾಂದಿ ಬಾಟಲಿಗಳನ್ನು ಹಾಗೂ 1.80 ಲಕ್ಷ ಮೌಲ್ಯದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಉಪ ನಿರೀಕ್ಷಕ ಸುನೀಲ ಹುಲ್ಗೊಳ್ಳಿ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿದ್ದು ಪಿ.ಎಸ್.ಐ ಜಯಶ್ರೀ ಪ್ರಭಾಕರ್ ಪ್ರಕರಣ ದಾಖಲಿಸಿದ್ದಾರೆ.