ಹೊಸದಿಗಂತ ಡಿಜಿಟಲ್ ಡೆಸ್ಕ್
1772 ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಕಲೈಯಾರ್ ಕೋಯಿಲ್ ಯುದ್ಧದಲ್ಲಿ ಶಿವಗಂಗೆಯ ರಾಜ ಮುತುವಡುಗನಾಥ ಉದಯ ತೇವರ್ ಹುತಾತ್ಮರಾದರು. ಸಾಮ್ರಾಜ್ಯದ ರಾಣಿ ವೇಲು ನಾಚಿಯಾರ್ ಅವರು ಕೊಲ್ಲಂಗುಡಿಯಲ್ಲಿ ಶಿಬಿರದಲ್ಲಿದ್ದಾಗ ಈ ದುರಂತದ ಬಗ್ಗೆ ತಿಳಿಸಲಾಯಿತು. ರಾಣಿ ಮತ್ತು ಆಕೆಯ ಆರು ವರ್ಷದ ಮಗಳು ವೆಲ್ಲಾಚಿಗೆ ಬ್ರಿಟೀಷರಿಂದ ತಪ್ಪಿಸಿಕೊಳ್ಳುವುದಲ್ಲದೆ ಬೇರೆ ದಾರಿ ಇರಲಿಲ್ಲ.
ಅದರ ಜೊತೆ ಆರ್ಕಾಟ್ ನವಾಬನೂ ಬ್ರಿಟಿಷರಿಗೆ ಎಲ್ಲಾ ಬೆಂಬಲ ಕೊಟ್ಟು ಪಲಾಯನ ಮಾಡುತ್ತಿದ್ದ ರಾಣಿ ಪರಿವಾರವನ್ನು ಬೆನ್ನಟ್ಟಿದ. ಈ ವೇಳೆ ಶತ್ರು ಪಾಳೆಯವನ್ನು ತಡೆದಿಡಬೇಕಾದರೆ ಶಿವಗಂಗೆಯ ಸೇನಾಪಡೆ ಯುದ್ಧವೊಂದನ್ನು ನಡೆಸಲೇ ಬೇಕಾದ ಅನಿವಾರ್ಯತೆ ಇತ್ತು. ಈ ಮಹತ್ಕಾರ್ಯಕ್ಕೆ ಸಿದ್ಧವಾಗಿದ್ದು ವೀರನಾರಿ ಉದಯಲ್. ಆಕೆಯ ನೇತೃತ್ವದ ಸೇನೆ ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಬ್ರಟೀಷರೊಂದಿಗೆ ಕಾದಾಡಿತು. ಇದೇ ಸಂದರ್ಭ ಬಳಸಿ ಬ್ರಟೀಷ್ ಸೈನ್ಯದ ಕಣ್ಣುತಪ್ಪಿಸಿ ರಾಣಿ ವೇಲು ನಾಚಿಯಾರ್ ರನ್ನು ಸುರಕ್ಷಿತ ಸ್ಥಳಕ್ಕೆ ದಾಟಿಸಲಾಯಿತು. ವೇಲು ನಾಚಿಯಾರ್ ಮತ್ತು ವೆಲ್ಲಚಿ ಯಶಸ್ವಿಯಾಗಿ ತಪ್ಪಿಸಿಕೊಂಡು ದಿಂಡಿಗಲ್ ಬಳಿಯ ವಿರುಪಾಚಿಯಲ್ಲಿ ಪಾಳೇಕಾರರ್ ಕೋಪಾಳ ನಾಯಕರ್ ರವರ ರಕ್ಷಣೆಯಲ್ಲಿ ಆಶ್ರಯ ಪಡೆದರು. ವೀರಾವೇಶದಿಂದ ಹೋರಾಡಿ ಸೆರೆಸಿಕ್ಕ ಧೈರ್ಯಶಾಲಿ ಮಹಿಳೆ ಉದಯಲ್ ಅವರನ್ನು ಎರಡು ತುಂಡುಗಳಾಗಿ ಕತ್ತರಿಸಲಾಯಿತು.
ಆಕೆಯ ತ್ಯಾಗವು ರಾಣಿ ವೇಲು ನಾಚಿಯಾರ್ ಮತ್ತು ಅವರ ಮಗಳು ವೆಲ್ಲಾಚಿಯ ಜೀವವನ್ನು ಕಾಪಾಡಿತು. ಆ ಬಳಿಕ ಕೆಲವೇ ವರ್ಷಗಳಲ್ಲಿ ಚೇತರಿಸಿಕೊಂಡ ಶಿವಗಂಗೆ ಸ್ವಾತಂತ್ರ್ಯವನ್ನು ಮರಳಿಪಡೆಯಿತು. ವೇಲು ನಾಚಿಯಾರ್ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಯುದ್ಧವನ್ನು ಗೆದ್ದ ಮೊದಲ ತಮಿಳು ರಾಣಿ ಎನಿಸಿಕೊಂಡಳು.
ರಾಣಿ ನಾಚಿಯಾರ್ ವೀರ ಮಹಿಳೆ ಉದಯಲ್ ಅವರ ತ್ಯಾಗಕ್ಕೆ ಋಣಿಯಾಗಿದ್ದಳು ಮತ್ತು ಅವಳಿಗೆ ಅಂತಿಮ ಗೌರವವನ್ನು ಸಲ್ಲಿಸಿದಳು. ತಮಿಳು ಪದ್ಧತಿಯಂತೆ ಉದಯಾಲ್ ಸಮಾಧಿ ಸ್ಥಳದಲ್ಲಿ ಮಧ್ಯದ ಕಲ್ಲು ಇರಿಸಿ ಗೌರವಿಸಲಾಯ್ತು. ಆ ಬಳಿಕ ರಾಣಿ ವೇಲು ನಾಚಿಯಾರ್ ಅವರು ಮಹಿಳಾ ಯೋಧರ ಸೈನ್ಯವನ್ನು ಬೆಳೆಸಲು ನಿರ್ಧರಿಸಿದರು ಮತ್ತು ಆಕೆಯ ಅತ್ಯುನ್ನತ ತ್ಯಾಗದ ಗೌರವಾರ್ಥವಾಗಿ ಆ ಸೈನ್ಯಕ್ಕೆ ಉದಯಲ್ ಎಂದು ಹೆಸರಿಸಿದರು.
ವೀರ ಮಹಿಳೆ ಉದಯಲ್ ಅವರನ್ನು ಕೊಲ್ಲಂಗುಡಿಯಲ್ಲಿ ಗ್ರಾಮ ದೇವತೆಯಾಗಿ “ವೆಟ್ಟು ಉದೈಯಲ್ ಕಾಳಿ” ಎಂದು ಪೂಜಿಸಲಾಗುತ್ತದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ