ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮಡೂರೊ ಹಾಗೂ ಪತ್ನಿ ಸಿಲಿಯಾ ಪ್ಲೋರ್ಸ್ ರನ್ನು ಅಮೆರಿಕ ಪಡೆಗಳು ಬಂಧಿಸಿರುವ ದೃಶ್ಯಗಳ ಮೊದಲ ವಿಡಿಯೋವನ್ನು ಅಮೆರಿಕ ಅಧಿಕಾರಿಗಳು ಬಹಿರಂಗಪಡಿಸಿದೆ. ಅಮೆರಿಕದ ಸರ್ಕಾರಿ ವಿಮಾನದಿಂದ ನ್ಯೂಯಾರ್ಕ್‌ನಲ್ಲಿ ಇಳಿದ ತಕ್ಷಣವೇ FBI ಏಜೆಂಟರು ಮಡೂರೊ ದಂಪತಿಯನ್ನು ಸುತ್ತುವರೆದಿದ್ದು, ಸಶಸ್ತ್ರ ರಕ್ಷಣೆಯೊಂದಿಗೆ ಡ್ರಗ್ಸ್ ಏಜೆನ್ಸಿ ಕಚೇರಿಯೊಳಗೆ ಕರೆದೊಯ್ಯುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ.
ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆ ಜಾಲದ ಪ್ರಮುಖ ಸೂತ್ರಧಾರನಾಗಿರುವ ಆರೋಪದ ಹಿನ್ನೆಲೆಯಲ್ಲಿ ಮಡೂರೊ ಅವರನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದು ಅಮೆರಿಕ ತಿಳಿಸಿದೆ. ಇಬ್ಬರನ್ನು ನ್ಯೂಯಾರ್ಕ್ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದ್ದು, ಮಡೂರೊ ರನ್ನು ಪ್ರಸ್ತುತ ನ್ಯೂಯಾರ್ಕ್ ಜೈಲಿನಲ್ಲಿ ಇರಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Rice series 42 | ಕಾಶ್ಮೀರಕ್ಕೆ ಹೋಗಿಲ್ಲ ಅಂದ್ರೆನಾಯ್ತು? ಅಲ್ಲಿನ ಪುಲಾವ್ ರುಚಿ ಮನೆಯಲ್ಲೇ ಮಾಡ್ಬಹುದಲ್ವಾ?
‘ಅಬ್ಸೊಲ್ಯೂಟ್ ರಿಸಾಲ್ವ್’ ಎಂಬ ಹೆಸರಿನ ಈ ಕಾರ್ಯಾಚರಣೆಯನ್ನು ತಿಂಗಳುಗಳ ಕಾಲ ಯೋಜಿಸಿ, ಕೇವಲ 30 ನಿಮಿಷಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಬಂಧನಕ್ಕೆ ಮುನ್ನ ಅಮೆರಿಕ ಪಡೆಗಳು ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಯುದಾಳಿ ನಡೆಸಿದ್ದು, ಈ ದಾಳಿಯಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ ಎಂದು ವೆನೆಜುವೆಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

