Thursday, January 8, 2026

ವೆನೆಜುವೆಲಾ ಅಧ್ಯಕ್ಷ ಮಡುರೊ ಸೆರೆ: ಟ್ರಂಪ್ ನಡೆಗೆ ಬಿಗ್ ಸೆಲ್ಯೂಟ್ ಎಂದ ಇಸ್ರೇಲ್ ಪ್ರಧಾನಿ ನೆತನ್ಯಾಹು!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ವೆನೆಜುವೆಲಾದಲ್ಲಿ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕ ಸೇನೆಯು ಬಂಧಿಸಿದ್ದು, ಈ ಕ್ರಮಕ್ಕೆ ಜಗತ್ತಿನಾದ್ಯಂತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ಕಾರ್ಯಾಚರಣೆಯನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಯಕತ್ವವನ್ನು ಹೊಗಳಿದ ನೆತನ್ಯಾಹು, ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೋರಿದ ಧೈರ್ಯಶಾಲಿ ಮತ್ತು ಐತಿಹಾಸಿಕ ನಾಯಕತ್ವಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ ಎಂದು ತಮ್ಮ ಸಾಮಾಜಿಕ ಮಾಧ್ಯಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಮೆರಿಕ ಸೈನಿಕರ ಅಸಾಧಾರಣ ಶಕ್ತಿ ಮತ್ತು ದೃಢ ಸಂಕಲ್ಪವು ಈ ಪ್ರದೇಶದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ನೆರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆನೆಜುವೆಲಾದ ಜನರ ಪರವಾಗಿ ಮಾತನಾಡಿದ ನೆತನ್ಯಾಹು, ಅಲ್ಲಿನ ಸರ್ವಾಧಿಕಾರಿ ಆಡಳಿತದಿಂದ ದಶಕಗಳಿಂದ ಬಳಲುತ್ತಿರುವ ಜನರೊಂದಿಗೆ ಇಸ್ರೇಲ್ ಗಟ್ಟಿಯಾಗಿ ನಿಲ್ಲುತ್ತದೆ ಎಂದಿದ್ದಾರೆ. ಮಡುರೊ ಆಡಳಿತವು ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆಯನ್ನು ಉತ್ತೇಜಿಸುತ್ತಿತ್ತು ಎಂಬುದು ಇಸ್ರೇಲ್‌ನ ಗಂಭೀರ ಆರೋಪವಾಗಿದೆ. ಮಡುರೊ ಪದಚ್ಯುತಿಯಿಂದ ಇಡೀ ಜಗತ್ತು ಈಗ ಹೆಚ್ಚು ಸುರಕ್ಷಿತವಾಗಲಿದೆ ಎಂಬುದು ಇಸ್ರೇಲ್‌ನ ಅಧಿಕೃತ ನಿಲುವಾಗಿದೆ.

ಮಡುರೊ ಅವರ ಬಂಧನವನ್ನು ಇಸ್ರೇಲ್ ತನ್ನ ಪರಮ ಶತ್ರು ರಾಷ್ಟ್ರವಾದ ಇರಾನ್‌ಗೆ ನೀಡಿದ ಬಲವಾದ ಎಚ್ಚರಿಕೆ ಎಂದು ಪರಿಗಣಿಸಿದೆ. ವೆನೆಜುವೆಲಾದ ಈ ಬೆಳವಣಿಗೆಗಳನ್ನು ಇರಾನ್ ಸರ್ಕಾರ ಬಹಳ ಎಚ್ಚರಿಕೆಯಿಂದ ಗಮನಿಸಬೇಕು ಎಂದು ಇಸ್ರೇಲ್‌ನ ವಿರೋಧ ಪಕ್ಷದ ನಾಯಕ ಯೈರ್ ಲ್ಯಾಪಿಡ್ ಎಚ್ಚರಿಸಿದ್ದಾರೆ. ಇರಾನ್ ಮತ್ತು ವೆನೆಜುವೆಲಾ ನಡುವಿನ ನಿಕಟ ಮಿಲಿಟರಿ ಸಂಬಂಧಗಳ ಹಿನ್ನೆಲೆಯಲ್ಲಿ, ಮಡುರೊ ಪತನವು ಇರಾನ್‌ಗೆ ಚೇತರಿಸಿಕೊಳ್ಳಲಾಗದ ದೊಡ್ಡ ಹಿನ್ನಡೆಯಾಗಲಿದೆ ಎಂದು ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ವಿಶ್ಲೇಷಿಸಿದ್ದಾರೆ.

error: Content is protected !!