ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ವಾಹನವು ರಸ್ತೆಯಿಂದ ಕಣಿವೆಗೆ ಉರುಳಿ ಬಿದ್ದು ಹುತಾತ್ಮರಾದ ಕುಂದಾಪುರ ಬೀಜಾಡಿಯ ಅನೂಪ್ ಪೂಜಾರಿ (೩೧) ಅವರ ಅಂತ್ಯ ಸಂಸ್ಕಾರ ಸಕಲ ಸರಕಾರಿ ಗೌರವಗಳೊಂದಿಗೆ ಬೀಜಾಡಿ ಗ್ರಾಮದ ಕಡಲ ತೀರದಲ್ಲಿ ಗುರುವಾರ ನಡೆಯಿತು. ಹುತಾತ್ಮ ಅನೂಪ್ ಪೂಜಾರಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ಕರೆತಂದು ಬೀಜಾಡಿಯ ಮನೆಯಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಪಾರ್ಥಿವ ಶರೀರ ಮನೆಗೆ ಬರುತ್ತಿದ್ದಂತೆಯೆ ಪತ್ನಿ, ತಾಯಿ, ಸಹೋದರಿಯರ ಹಾಗೂ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತು. ಮನೆ ಮಂದಿಯ ನೋವಿನ ಆಕ್ರಂಧನ ಎಂತವರ ಮನವೂ ಕಕ್ಕುವಂತಿತ್ತು. ಕುಟುಂಬದ ಆಧಾರ ಸ್ತಂಭವಾಗಿದ್ದ ಅನೂಪ್ ಪೂಜಾರಿ ಅಗಲುವಿಕೆ ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿತು.
ಬೀಜಾಡಿಯ ಕಡಲ ತೀರದಲ್ಲಿ ಅನೂಪ್ ಪೂಜಾರಿ ಅವರ ಅಂತಿಮ ಸಂಸ್ಕಾರ ಸರಕಾರದ ಗೌರವದೊಂದಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬೀಜಾಡಿಯ ಕಡಲ ಕಿನಾರೆಯ ಸರಕಾರಿ ಸ್ಥಳದಲ್ಲಿ ನಡೆಯಿತು. ಭಾರತೀಯ ಭೂಸೇನೆ ವತಿಯಿಂದ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಿದರು.
ಅಮರ್ ರಹೆ ಅಮರ್ ರಹೆ ಅನೂಪ್ ಪೂಜಾರಿ ಅಮರ್ ರಹೆ, ಜೈ ಜವಾನ್ ಕೈ ಕಿಸಾನ್, ಭಾರತ್ ಮಾತಾ ಕಿ ಜೈ ಎಂಬ ಘೋಷ ವಾಕ್ಯ ಮೊಳಗುತ್ತಿತ್ತು. ಹುಟ್ಟೂರು ಬೀಜಾಡಿ ಶೋಕ ಸಾಗರದಲ್ಲಿ ಮುಳುಗಿತ್ತು. ಅಂತಿಮ ದರ್ಶನಕ್ಕೆ ಬಂದವರು ದುಖತಪ್ತರಾಗಿ ಕಣ್ಣೀರು ಸುರಿಸುತ್ತಿದ್ದ ದೃಶ್ಯ ಕಂಡು ಬಂದಿತು.