ರಾಮಲಲ್ಲಾ ಪ್ರತಿಷ್ಠಾಪನೆ- ಜನವರಿ 1ರಿಂದ ಅಕ್ಷತೆ ತಲುಪಿಸಲಿದೆ ವಿ ಎಚ್ ಪಿ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಜನವರಿ 22ರಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಟಾಪನೆಯಾಗುವ ಪೂರ್ವದಲ್ಲಿ ಹಮ್ಮಿಕೊಂಡಿರುವ ಜನಸಂಪರ್ಕ ಕಾರ್ಯಕ್ರಮದ ಬಗ್ಗೆ ವಿಶ್ವ ಹಿಂದು ಪರಿಷತ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ವಿವರಗಳನ್ನು ಹಂಚಿಕೊಂಡಿದೆ.

ಶ್ರೀ ರಾಮಜನ್ಮಭೂಮಿ ತೀರ್ಥ ಟ್ರಸ್ಟ್ ಜನರಿಗೆ ಪವಿತ್ರ ಮಂತ್ರಾಕ್ಷತೆಯನ್ನು ತಲುಪಿಸುವ ಜವಾಬ್ದಾರಿಯನ್ನು ವಿ ಎಚ್ ಪಿಗೆ ವಹಿಸಿದ್ದು, ಹಲವು ಸಂಘಟನೆಗಳ ಸಹಾಯದೊಂದಿಗೆ ಜನವರಿ 1ರಿಂದ 15ರವರೆಗೆ ಈ ಕಾರ್ಯ ಮಾಡುವುದಾಗಿ ಸಂಘಟನೆ ಹೇಳಿದೆ. ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ, ರಾಮ ಮಂದಿರದ ಚಿತ್ರ, ಮತ್ತು ನಿವೇದನಾ ಪತ್ರಗಳನ್ನು ಕಾರ್ಯಕರ್ತರು ನಗರ ಮತ್ತು ಗ್ರಾಮೀಣ ಪ್ರದೇಶಗಳ ಮನೆ-ಮನೆಗೆ ತಲುಪಿಸಲಿದ್ದಾರೆ. 

ಜನವರಿ 22ರಂದು ಪ್ರಾಣ ಪ್ರತಿಷ್ಟಾಪನೆ ಸಂದರ್ಭದಲ್ಲಿ ಹತ್ತಿರದ ದೇವಾಲಯಗಳಲ್ಲಿ ವಿಶೇಷ ಸತ್ಸಂಗ ಮತ್ತು ಭಜನಾ ಕಾರ್ಯಕ್ರಮಗಳಿರುತ್ತವೆ. ಪರದೆಗಳ ಮೂಲಕ ನೇರ ಪ್ರದರ್ಶನವನ್ನು ನೋಡುವ ಅವಕಾಶವನ್ನು ಸಹ ಕಲ್ಪಿಸಲಾಗುತ್ತಿದೆ. ಆ ದಿನ ಸಂಜೆ ಪ್ರತಿಯೊಬ್ಬರೂ ತಮ್ಮ ಮನೆಯೆದುರು ಅಯೋಧ್ಯೆಯ ದಿಕ್ಕಿನಲ್ಲಿ ಕನಿಷ್ಟ ಐದು ದೀಪಗಳನ್ನು ಬೆಳಗಿಸಿಡಬೇಕೆಂದು ಶ್ರೀ ರಾಮಜನ್ಮಭೂಮಿ ತೀರ್ಥ ಟ್ರಸ್ಟ್ ಹಿಂದು ಸಮಾಜಕ್ಕೆ ಕೇಳಿಕೊಂಡಿದೆ ಎಂದು ವಿ ಎಚ್ ಪಿ ತಿಳಿಸಿದೆ.

ಬೆಂಗಳೂರಿನ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ರಾಷ್ಟ್ರೀಯ ‌ಸ್ವಯಂಸೇವಕ‌ ಸಂಘದ ಕ್ಷೇತ್ರೀಯ ಕಾರ್ಯವಾಹರಾದ ನಾ. ತಿಪ್ಪೇಸ್ವಾಮಿ, ವಿಶ್ವ ಹಿಂದೂ ಪರಿಷತ್, ಕರ್ನಾಟಕ ದಕ್ಷಿಣದ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!