ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇಗುಲದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಅನ್ನು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆ, ಡಾ. ಸುದೇಶ್ ಧನ್ಕರ್, ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಮೊದಲಾದವರು ಉಪಸ್ಥಿತರಿದ್ದರು.
ತಿರುಪತಿ, ಶಿರಡಿ ಕ್ಷೇತ್ರಗಳಲ್ಲಿ ದೇವರ ದರುಶನ ಪಡೆಯಬೇಕಾದ್ರೆ ಕ್ಯೂ ಕಾಂಪ್ಲೆಕ್ಸ್ ಮೂಲಕ ಹೋಗುವ ಮಾದರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಕ್ಯೂ ಕಾಂಪ್ಲೆಕ್ಸ್ ವ್ಯವಸ್ಥೆ ಮಾಡಲಾಗಿದೆ.
ಈ ಕಾಂಪ್ಲೆಕ್ಸ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ?
ಶ್ರೀ ಸಾನ್ನಿಧ್ಯ ಅನ್ನೋ ಈ ಕ್ಯೂ ಕಾಂಪ್ಲೆಕ್ಸ್ ಬಹಳಷ್ಟು ವಿಶಿಷ್ಟತೆಯಿಂದ ಕೂಡಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಲ್ಲದೇ ವಿಶಾಲವಾದ ಭವನದಲ್ಲಿ ಕುರ್ಚಿಯಲ್ಲಿ ಕುಳಿತು ಕ್ರಮೇಣವಾಗಿ ಮುಂದಿನ ಭವನಗಳಿಗೆ ಸ್ಥಳಾಂತರಗೊಳ್ಳಬಹುದು. ಎರಡು ಅಂತಸ್ತಿನಲ್ಲಿ ತಲಾ 8 ರಂತೆ ಒಟ್ಟು 16 ವಿಶಾಲ ಭವನಗಳಿದ್ದು ಪ್ರತಿ ಭವನದಲ್ಲಿ 800 ಮಂದಿಯಂತೆ ಸುಮಾರು 12 ಸಾವಿರ ಮಂದಿ ತಂಗಲು ಅವಕಾಶವಿದೆ. ಇಡೀ ಸಂಕೀರ್ಣ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಕ್ಯೂ ಕಾಂಪ್ಲೆಕ್ಸ್‌ಗೆ ಎಂಟ್ರಿಯಾಗುತ್ತಿದ್ದಂತೆ ಎ.ಐ ತಂತ್ರಜ್ಞಾನದ ಕ್ಯಾಮೆರಾ ಎಲ್ಲಾ ಭಕ್ತರ ಸಂಖ್ಯೆಗಳನ್ನು ಲೆಕ್ಕ ಹಾಕುತ್ತದೆ. ಆರಂಭದಲ್ಲೇ ಸೇವಾ ರಶೀದಿ ಕೌಂಟರ್ ಇದ್ದು, ಬಳಿಕ ಕೊಠಡಿಗೆ ಎಂಟ್ರಿ ನೀಡಲಾಗುತ್ತದೆ. ಸುಂದರ ಕಲಾಕೃತಿಗಳಿಂದ ಆಕರ್ಷಿಸುವ ಈ ಕ್ಯೂ ಕಾಂಪ್ಲೆಕ್ಸ್ ನ ಪ್ರತೀ ಕೊಠಡಿಯೊಳಗೂ ಸುಸಜ್ಜಿತ ಆಸನಗಳು, ನೀರಿನ ವ್ಯವಸ್ಥೆ, ಶೌಚಾಲಯ, ಮಕ್ಕಳ ಆರೈಕೆ ಕೊಠಡಿ, ಟಿವಿ, ಉಚಿತ ಉಪಾಹಾರದ ವ್ಯವಸ್ಥೆ ಇದ್ದು ಇಡೀ ಕೊಠಡಿ 27 ಡಿಗ್ರಿ ಸೆಲ್ಸಿಯಸ್ ಕೂಲಿಂಗ್ ಸಿಸ್ಟಮ್ ನಿಂದ ಕೂಡಿದೆ. ಇಂತಹ ಸುಸಜ್ಜಿತ ಆಧುನಿಕ ತಂತ್ರಜ್ಞಾನ ಕ್ಯೂ ಕಾಂಪ್ಲೆಕ್ಸ್ ಬೇರೆಲ್ಲೂ ಇಲ್ಲ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.