ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ಅಭಿನಯದ ಛಾವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ. ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರಕ್ಕೆ ವಿಕ್ಕಿ ಕೌಶಲ್ ಜೀವ ತುಂಬಿದ್ದಾರೆ. ಇನ್ನು ನಟಿ ರಶ್ಮಿಕಾ ಜೇಸುಬಾಯಿ ಮಹಾರಾಣಿ ಪಾತ್ರದಲ್ಲಿ ಅಮೋಘ ಅಭಿನಯ ಮಾಡಿದ್ದು, ಜನರಿಗೆ ಸಿನಿಮಾ ಇಷ್ಟವಾಗಿದೆ.
ಈ ಚಿತ್ರದ ಬಗ್ಗೆ ಆರಂಭದಲ್ಲಿ ದೊಡ್ಡ ಕ್ರೇಜ್ ಇರಲಿಲ್ಲ. ಆದರೆ ರಿಲೀಸ್ ಬಳಿಕ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಕಲೆಕ್ಷನ್ ಹೆಚ್ಚುತ್ತಾ ಹೋಯಿತು. ಈಗ ಮೂರು ದಿನಕ್ಕೆ ಈ ಸಿನಿಮಾ ಬರೋಬ್ಬರಿ 121 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಸೂಪರ್ ಹಿಟ್ ಎನಿಸಿಕೊಂಡಿದೆ. ರಶ್ಮಿಕಾ ಮಂದಣ್ಣ ಅವರ ಹಿಟ್ ಸಿನಿಮಾಗಳ ಪಟ್ಟಿಗೆ ಈಗ ‘ಛಾವ’ ಕೂಡ ಸೇರ್ಪಡೆ ಆದಂತೆ ಆಗಿದೆ.
ಮೊದಲ ದಿನ ‘ಛಾವ’ ಸಿನಿಮಾ 33.10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಸಿನಿಮಾ ನೋಡಿದ ಅನೇಕರು ಪಾಸಿಟಿವ್ ಪ್ರತಿಕ್ರಿಯೆ ನೀಡಿದರು. ಅಂದು ವ್ಯಾಲೆಂಟೈನ್ಸ್ ಡೇ ಆದ್ದರಿಂದ ಹಲವರು ಚಿತ್ರಮಂದಿರಕ್ಕೆ ಬಂದರು. ಎರಡನೇ ದಿನದ ಕಲೆಕ್ಷನ್ 39.30 ಕೋಟಿ ರೂಪಾಯಿ ಆಯಿತು. ವೀಕೆಂಡ್ನಲ್ಲಿ ಸಿನಿಮಾದ ಬಗ್ಗೆ ಟಾಕ್ ಜಾಸ್ತಿ ಆಯಿತು. ಅದರ ಫಲವಾಗಿ 3ನೇ ದಿನವಾದ ಭಾನುವಾರ ಈ ಸಿನಿಮಾ 49.03 ಕೋಟಿ ರೂಪಾಯಿ ಗಳಿಸಿತು.
‘ಛಾವ’ ಸಿನಿಮಾದಲ್ಲಿ ಛತ್ರಪತಿ ಶಂಭಾಜಿ ಮಹಾರಾಜ್ ಜೀವನದ ಕಥೆ ಇದೆ. ಆ ಪಾತ್ರವನ್ನು ವಿಕ್ಕಿ ಕೌಶಲ್ ಅವರು ನಿಭಾಯಿಸಿದ್ದಾರೆ. ಶಂಭಾಜಿ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ. ಲಕ್ಷ್ಮಣ್ ಉಟೇಕರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಮೆಡಾಕ್ ಫಿಲ್ಮ್ಸ್’ ಮೂಲಕ ಈ ಚಿತ್ರ ನಿರ್ಮಾಣ ಆಗಿದ್ದು, ನಿರ್ಮಾಪಕರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ‘ಛಾವ’ ಚಿತ್ರದಿಂದಾಗಿ ವಿಕ್ಕಿ ಕೌಶಲ್ ಅವರ ಚಾರ್ಮ್ ಹೆಚ್ಚಾಗಿದೆ.