ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಮಹಾದೇವಪ್ಪ ಮೇಲೆ ನೀಡಿರುವ ಪೋಕ್ಸೋ ದೂರನ್ನು ವಾಪಸ್ ಹಿಂಪಡೆದಿದ್ದೇವೆ ಎಂದು ಸಂತ್ರಸ್ತ ಬಾಲಕಿಯ ತಾಯಿ ಹೇಳಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತೆಯ ತಾಯಿ, ನಾವು ಕೂಡ ಕನ್ನಡಿಗರೇ. ಈ ವಿಚಾರದಲ್ಲಿ ಕನ್ನಡ-ಮರಾಠಿಗರ ನಡುವೆ ಜಗಳ ಆಗುತ್ತಿದೆ. ನಿರ್ವಾಹಕ ಮಹಾದೇವಪ್ಪ ಅವರ ಮೇಲೆ ನೀಡಿದ್ದ ದೂರನ್ನು ಹಿಂಪಡೆದಿದ್ದೇವೆ ಎಂದರು.
ನಮ್ಮ ಮಗ, ಮಗಳು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಬಸ್ನಲ್ಲಿ ಟಿಕೆಟ್ ವಿಚಾರವಾಗಿ ಜಗಳವಾಗಿದೆ. ಈ ವೇಳೆ ಕನ್ನಡ, ಮರಾಠಿಗರ ಗಲಾಟೆ ಅಂತ ಸುಳ್ಳು ಹಬ್ಬಿಸಲಾಗಿದೆ. ಇದರಿಂದ ಮಹಾರಾಷ್ಟ್ರ, ಕರ್ನಾಟಕದ ನಡುವೆ ಜಗಳ ಶುರುವಾಗಿದೆ. ಭಾಷೆ ಮರಾಠಿ ಆಗಿದ್ದರೂ, ನಾವು ಕನ್ನಡಿಗರೇ. ಇದರಿಂದ ನಮಗೂ ಬೇಸರವಾಗಿದೆ ಎಂದಿದ್ದಾರೆ.
ತಮ್ಮ ಮೇಲೆ ನಡೆದ ಹಲ್ಲೆಯ ಸಂಬಂಧ ನಿರ್ವಾಹಕ ಮಹಾದೇವ ಹುಕ್ಕೇರಿ ಬೆಳಗಾವಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಬಾಲಕಿ ನಿರ್ವಾಹಕ ಮಹಾದೇವ ಹುಕ್ಕೇರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದರು. ನಿರ್ವಾಹಕ ಮಹಾದೇವ ಹುಕ್ಕೇರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ, ಆಕ್ರೋಶ ವ್ಯಕ್ತವಾಗಿದೆ. ನಿರ್ವಾಹಕ ಮಹಾದೇವ ಹುಕ್ಕೇರಿ ಮೇಲಿನ ಪೋಕ್ಸೋ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಇಂದು ಬೆಳಗಾವಿ ಪೊಲೀಸ್ ಆಯುಕ್ತರಿಗೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ.