ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ವಾಙ್ಮಯ ವಿಹಾರದಲ್ಲಿ ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ, ಸಂಪಾದಕ ಮತ್ತು ವಾಗ್ಮಿಯಾಗಿ ಗುರುತಿಸಿಕೊಂಡು ವಿಶಿಷ್ಟ ಸಾಧನೆ ಮಾಡಿದ್ದ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಾ. ಪಂಚಾಕ್ಷರಿ ಹಿರೇಮಠ ನಿಧನರಾಗಿದ್ದಾರೆ.
ಕಾವ್ಯ, ಗದ್ಯ, ಪತ್ರ ಸಾಹಿತ್ಯ, ಸಣ್ಣಕಥೆ, ಸಂಶೋಧನೆ, ಸಂಪಾದನೆ ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸಿದ್ಧಿ ಸಾಧಿಸಿದ್ದ ಇವರು ಬಹುಭಾಷಾ ಕೋವಿದರು. ಹಲವು ಭಾಷೆಗಳಿಂದ ಅನೇಕ ಸಾಹಿತ್ಯ ಕೃತಿ ರತ್ನಗಳನ್ನು ಕನ್ನಡಕ್ಕೆ ಅನುವಾದಿಸಿ, ಜೊತೆಗೆ ಅವುಗಳ ಬಗೆಗೆ ಕನ್ನಡದಲ್ಲಿ ಸ್ವತಂತ್ರವಾಗಿ ಬರೆದು ಭಾಷಾಬಾಂಧವ್ಯಕ್ಕೆ ನಾಂದಿ ಹಾಡಿದ್ದರು.
19 ಕಾವ್ಯ ಸಂಕಲನಗಳು, 11 ಕಥಾ ಸಂಕಲನಗಳು, ಉರ್ದು ಮತ್ತು ಹಿಂದಿಯಿಂದ ಕನ್ನಡಕ್ಕೆ ತಂದ 8 ಅನುವಾದಿತ ಕಾದಂಬರಿಗಳು, 13 ಪ್ರಬಂಧ ಮತ್ತು ವಿಮರ್ಶೆಯ ಕೃತಿಗಳು, 7 ಚಿಂತನ ಸಾಹಿತ್ಯ ಕೃತಿಗಳು, 6 ಜೀವನ ಚರಿತ್ರೆಗಳು, 3 ಪತ್ರ ಸಾಹಿತ್ಯ ಕೃತಿಗಳು, 2 ಚರಿತ್ರೆಗಳು, 7 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದಿತ ನಾಟಕಗಳು, ಸಂಪಾದನೆಯ 8 ಕೃತಿಗಳು, ಹಿಂದಿ, ತೆಲಗು ಹಾಗೂ ಆಂಗ್ಲಭಾಷೆಗೆ ಭಾಷಾಂತರಗೊಂಡ 8 ಕೃತಿಗಳು ಸೇರಿ ಸುಮಾರು ನೂರಕ್ಕೂ ಹೆಚ್ಚು ಉಪಯುಕ್ತ ಕೃತಿಗಳನ್ನು ಕನ್ನಡ ಸಾರಸ್ವತಲೋಕಕ್ಕೆ ಸಮರ್ಪಿಸಿ ಧನ್ಯತೆಯನ್ನು ಕಂಡ ಡಾ.ಪಂಚಾಕ್ಷರಿ ಹಿರೇಮಠ ಅವರು ಅಪ್ಪಟ ಭಾವಜೀವಿ ಮತ್ತು ಕನಸುಗಾರರಾಗಿದ್ದರು.
ಪಂಚಾಕ್ಷರಿ ಅವರ ನಿಧನಕ್ಕೆ ಗಣ್ಯರು, ಸಿಎಂ ಸಿದ್ದರಾಮಯ್ಯ ಹಾಗೂ ಇನ್ನಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.