May 9, 2026
Saturday, May 9, 2026
spot_img

ವಿಜಯ್‌ಗೆ ಎದುರಾಯ್ತು ಕಾನೂನು ಸಂಕಷ್ಟ: ಶಾಸಕ ಕಾಮರಾಜ್ ಬೆಂಬಲದ ಸುತ್ತ ಅನುಮಾನದ ಹುತ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆಯ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ, ನಟ ವಿಜಯ್ ಅವರ ಟಿವಿಕೆ ಪಕ್ಷವು ನಕಲಿ ಬೆಂಬಲ ಪತ್ರವನ್ನು ಬಳಸುತ್ತಿದೆ ಎಂದು ಆರೋಪಿಸಿ ಎಎಂಎಂಕೆ ಪೊಲೀಸರಿಗೆ ದೂರು ನೀಡಿದೆ. ಎಎಂಎಂಕೆಯ ಏಕೈಕ ಶಾಸಕ ಎಸ್. ಕಾಮರಾಜ್ ಅವರ ಸಹಿಯನ್ನು ಫೋರ್ಜರಿ ಮಾಡಿ ರಾಜ್ಯಪಾಲರಿಗೆ ಸಲ್ಲಿಸಲಾಗಿದೆ ಎಂಬುದು ಈ ದೂರಿನ ಸಾರಾಂಶ.

ತಮಿಳುನಾಡು ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ, ಸರ್ಕಾರ ರಚಿಸಲು ಪ್ರತಿ ಶಾಸಕನ ಬೆಂಬಲವೂ ಮುಖ್ಯವಾಗಿದೆ. ಈ ಸಂದರ್ಭದಲ್ಲಿ ಕಾಮರಾಜ್ ಅವರು ತಮಗೆ ಬೆಂಬಲ ನೀಡಿದ್ದಾರೆ ಎಂದು ಟಿವಿಕೆ ಹಕ್ಕು ಮಂಡಿಸಿತ್ತು. ಆದರೆ, “ನಾನು ಟಿವಿಕೆಗೆ ಬೆಂಬಲ ನೀಡಿಲ್ಲ, ಅದು ನಕಲಿ ಪತ್ರ” ಎಂದು ಕಾಮರಾಜ್ ಸ್ಪಷ್ಟಪಡಿಸಿದ್ದಾರೆ.

ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ವಿಜಯ್ ನೇತೃತ್ವದ ಟಿವಿಕೆ, ಕಾಮರಾಜ್ ಅವರು ಬೆಂಬಲ ಪತ್ರಕ್ಕೆ ಸಹಿ ಹಾಕುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋದಲ್ಲಿ ಕಾಮರಾಜ್ ಅವರು ದಿನಕರನ್ ಅವರ ಅನುಮತಿಯೊಂದಿಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಎಎಂಎಂಕೆ ಈ ವಿಡಿಯೋವನ್ನು ‘ಕೃತಕ ಬುದ್ಧಿಮತ್ತೆ’ ಬಳಸಿ ಸೃಷ್ಟಿಸಿದ ನಕಲಿ ವಿಡಿಯೋ ಎಂದು ಗಂಭೀರವಾಗಿ ಆರೋಪಿಸಿದೆ.

ಟಿಟಿವಿ ದಿನಕರನ್ ಅವರು ಮಾತನಾಡಿ, “ಟಿವಿಕೆ ಪಕ್ಷವು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ರಾಜ್ಯಪಾಲರ ಹಾದಿ ತಪ್ಪಿಸುತ್ತಿದೆ. ಕುದುರೆ ವ್ಯಾಪಾರಕ್ಕೆ ಮುಂದಾಗಿರುವ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ, ಈ ಪ್ರಕರಣವು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಸರ್ಕಾರ ರಚನೆಯ ಬಿಕ್ಕಟ್ಟು ಮತ್ತಷ್ಟು ಸಂಕೀರ್ಣಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !