ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಸಮೀಕರಣಗಳು ವೇಗವಾಗಿ ಬದಲಾಗುತ್ತಿವೆ. ವಿಜಯ್ ನೇತೃತ್ವದ ಟಿವಿಕೆ ಮತ್ತು ಬಿಜೆಪಿ ನಡುವೆ ಮೈತ್ರಿ ಮಾತುಕತೆಗಳು ಅಂತಿಮ ಹಂತಕ್ಕೆ ತಲುಪಿರುವುದಾಗಿ ಮೂಲಗಳು ತಿಳಿಸಿವೆ.
ಒಪ್ಪಂದದ ಭಾಗವಾಗಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ವಿಜಯ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಪ್ರಸ್ತಾವನೆ ಬಿಜೆಪಿ ಮುಂದಿಟ್ಟಿದೆ ಎನ್ನಲಾಗಿದೆ.
ಸೀಟು ಹಂಚಿಕೆ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಟಿವಿಕೆಗೆ ಸುಮಾರು 80 ಕ್ಷೇತ್ರಗಳನ್ನು ನೀಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಈ ಒಪ್ಪಂದ ಕಾರ್ಯರೂಪಕ್ಕೆ ಬಂದರೆ ರಾಜ್ಯದ ರಾಜಕೀಯ ಲೆಕ್ಕಾಚಾರಗಳಲ್ಲಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ:
ವಿಜಯ್ ಅವರಿಗೆ ರಾಜ್ಯದಲ್ಲಿ ಭಾರೀ ಅಭಿಮಾನಿ ಬಳಗವಿದ್ದು, ಹಲವಾರು ಕ್ಷೇತ್ರಗಳಲ್ಲಿ ಅವರ ಪ್ರಭಾವ ಮತದಾರರ ನಿರ್ಧಾರವನ್ನು ತಿರುಗಿಸುವಷ್ಟು ಶಕ್ತಿಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಕೇವಲ 2 ಶೇಕಡಾ ಮತಗಳ ವ್ಯತ್ಯಾಸವೂ ಗೆಲುವು-ಸೋಲನ್ನು ನಿರ್ಧರಿಸುವ ಸ್ಥಿತಿ ಇರುವುದರಿಂದ ಅವರ ಬೆಂಬಲ ಮಹತ್ವ ಪಡೆದುಕೊಳ್ಳಬಹುದು.
ಈ ಹಿಂದೆ ವಿಜಯ್ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಈಗ ಚುನಾವಣಾ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.



