ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು ಮಣಿಸಿದ ಕರ್ನಾಟಕ ತಂಡ ಐದನೇ ಬಾರಿಗೆ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ವಿದರ್ಭ ವಿರುದ್ದ ಕರ್ನಾಟಕ 36 ರನ್ ಗೆಲುವು ದಾಖಲಿಸಿದೆ. ಕರ್ನಾಟಕ ನೀಡಿದ 348 ರನ್ ಬೃಹತ್ ಟಾರ್ಗೆಟ್ ಚೇಸಿಂಗ್ ಮಾಡಿದ ವಿದರ್ಭ 312 ರನ್‌ಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಈ ಮೂಲಕ ಕರ್ನಾಟಕ 5ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು.
ಕರ್ನಾಟಕದ ಮಾಜಿ ಆಟಗಾರ ಕರುಣ್ ನಾಯರ್ ಮುನ್ನಡೆಸಿದ ವಿದರ್ಭ ತಂಡ ಉತ್ತಮ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡಕ್ಕೆ ಯಶಸ್ಸು ಸಿಗಲಿಲ್ಲ.
ಸಮರನ್ ರವಿಚಂದ್ರನ್ ಶತಕ, ಕೃಷ್ಣನ್ ಶ್ರೀಜಿತ್ ಹಾಗೂ ಅಭಿನವ್ ಮನೋಹರ್ ಹಾಫ್ ಸೆಂಚುರಿ ನೆರವಿನಿಂದ ಕರ್ನಾಟಕ 6 ವಿಕೆಟ್ ನಷ್ಟಕ್ಕೆ 348 ರನ್ ಸಿಡಿಸಿತ್ತು. ಈ ಟಾರ್ಗೆಟ್‌ಗೆ ಉತ್ತರವಾಗಿ ವಿದರ್ಭ ದಿಟ್ಟ ಹೋರಾಟ ನೀಡಿತ್ತು. ಧ್ರುವ್ ಶೊರೆ ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ಸಿಡಿಸಿದ್ದರು. ಧ್ರುವ್ 110 ರನ್ ಸಿಡಿಸಿದರು. ಆದರೆ ಪ್ರಸಿದ್ಧ್ ಕೃಷ್ಣ ವಾಸುಕಿ ಕೌಶಿಕ್, ಅಭಿಲಾಶ್ ಶೆಟ್ಟಿ ಹಾಗೂ ಹಾರ್ದಿಕ್ ರಾಜ್ ದಾಳಿಗೆ ವಿದರ್ಭ ದಿಢೀರ್ ಕುಸಿತ ಕಂಡಿತು.
ಅಂತಿಮ ಹಂತದಲ್ಲಿ ಹರ್ಷಾ ದುಬೆ ಹೋರಾಟ ನೀಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಕರ್ನಾಟದ ದಿಟ್ಟ ಬೌಲಿಂಗ್ ದಾಳಿಗೆ ವಿದರ್ಭ 48.2 ಓವರ್‌ಗಳಲ್ಲಿ 312 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಕರ್ನಾಟಕ 36 ರನ್ ಗೆಲುವು ಕಂಡಿತು.