May 9, 2026
Saturday, May 9, 2026
spot_img

ಸಿಎಂ ಕುರ್ಚಿಯತ್ತ ವಿಜಯ್: ಕಾಂಗ್ರೆಸ್, ಎಡಪಕ್ಷಗಳ ಬೆನ್ನಲ್ಲೇ ಟಿವಿಕೆ ಕೈಹಿಡಿದ ವಿಸಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ವಿಧಾನಸಭಾ ಚುನಾವಣೆಯ ಬಳಿಕದ ರಾಜಕೀಯ ಹಗ್ಗಜಗ್ಗಾಟಕ್ಕೆ ಕೊನೆಗೂ ಅಂತ್ಯ ಬೀಳುವ ಲಕ್ಷಣಗಳು ಕಾಣುತ್ತಿವೆ. ನಟ ಹಾಗೂ ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ವಿಸಿಕೆ ಪಕ್ಷವು ಬೇಷರತ್ ಬೆಂಬಲ ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆಯಿಂದಾಗಿ ವಿಜಯ್ ನೇತೃತ್ವದ ಒಕ್ಕೂಟಕ್ಕೆ ಅಗತ್ಯವಿರುವ 118 ಶಾಸಕರ ಬೆಂಬಲ ಲಭ್ಯವಾಗಿದೆ.

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಕನಿಷ್ಠ 118 ಶಾಸಕರ ಬೆಂಬಲದ ಅಗತ್ಯವಿದೆ. ವಿಜಯ್ ನೇತೃತ್ವದ ಒಕ್ಕೂಟದಲ್ಲಿ ಈಗಾಗಲೇ ಟಿವಿಕೆಯೊಂದಿಗೆ ಕಾಂಗ್ರೆಸ್‌ನ 5 ಮತ್ತು ಎಡಪಕ್ಷಗಳ 4 ಶಾಸಕರು ಸೇರಿ ಒಟ್ಟು 116 ಸದಸ್ಯರ ಬೆಂಬಲವಿತ್ತು. ಈಗ ವಿಸಿಕೆಯ ಇಬ್ಬರು ಶಾಸಕರು ಬೆಂಬಲ ಪತ್ರ ನೀಡಿದ ಬೆನ್ನಲ್ಲೇ ಈ ಸಂಖ್ಯೆ 118ಕ್ಕೆ ಏರಿಕೆಯಾಗಿದೆ. ಇದು ಸರ್ಕಾರ ರಚನೆಗೆ ಬೇಕಾದ ಸರಳ ಬಹುಮತವಾಗಿದೆ.

ಬಹುಮತದ ಸಂಖ್ಯೆ ಸಿಗುತ್ತಿದ್ದಂತೆಯೇ ವಿಜಯ್ ಅವರು ತಮ್ಮ ಚೆನ್ನೈ ನಿವಾಸದಿಂದ ನಿರ್ಗಮಿಸಿದ್ದು, ರಾಜ್ಯಪಾಲರನ್ನು ಭೇಟಿ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಇಂದು ಸಂಜೆ 7:10ಕ್ಕೆ ಕೇರಳದ ತಿರುವನಂತಪುರಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಜ್ಯಪಾಲರು ನಗರದಿಂದ ಹೊರಡುವ ಮೊದಲೇ ವಿಜಯ್ ಅವರು ಶಾಸಕರ ಬೆಂಬಲ ಪತ್ರದೊಂದಿಗೆ ಹಕ್ಕು ಮಂಡಿಸುವ ಸಾಧ್ಯತೆಯಿದೆ.

ವಿಸಿಕೆ ಪಕ್ಷವು ಅಧಿಕೃತವಾಗಿ ಈ ಬಗ್ಗೆ ಘೋಷಣೆ ಮಾಡದಿದ್ದರೂ, ಮೂಲಗಳ ಪ್ರಕಾರ ಇಬ್ಬರು ಶಾಸಕರು ಈಗಾಗಲೇ ಟಿವಿಕೆಗೆ ಬೆಂಬಲ ಸೂಚಿಸಿದ್ದಾರೆ. ಇದು ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳ ದಶಕಗಳ ಆಡಳಿತದ ನಂತರ ಹೊಸ ಬದಲಾವಣೆಗೆ ನಾಂದಿ ಹಾಡಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !