ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ದಳಪತಿ ವಿಜಯ್ ಮಗ ಜೇಸನ್ ಸಂಜಯ್ ‘ಸಿಗ್ಮಾ’ ಚಿತ್ರದ ಮೂಲಕ ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿದ್ದು, ಸಿನಿಮಾ ಇದೇ ಅಕ್ಟೋಬರ್ 2, 2026ರಂದು ರಿಲೀಸ್ ಆಗಲು ರೆಡಿಯಾಗಿದೆ. ಸಂದೀಪ್ ಕಿಶನ್ ನಾಯಕನಾಗಿ ನಟಿಸಿರೋ ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಜೇಸನ್ ಸಂಜಯ್ ಆಡಿದ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ.
ಸಾಮಾನ್ಯವಾಗಿ ದೊಡ್ಡ ಸ್ಟಾರ್‌ಗಳ ಮಕ್ಕಳು ಚಿತ್ರರಂಗಕ್ಕೆ ಬರ್ತಾರೆ ಅಂದ್ರೆ, ತಂದೆಯಂದಿರು ಕೋಟಿ ಕೋಟಿ ಹಣ ಸುರಿಯುತ್ತಾರೆ ಇಲ್ಲವೇ ದೊಡ್ಡ ದೊಡ್ಡ ಕ್ರ್ಯೂ ಸೆಟ್ ಮಾಡಿ ಪ್ರಮೋಷನ್ ಜವಾಬ್ದಾರಿ ಹೊರುತ್ತಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಈವೆಂಟ್‌ನಲ್ಲಿ ನಿರೂಪಕರು ಜೇಸನ್‌ಗೆ “ನಿಮ್ಮ ಚೊಚ್ಚಲ ಸಿನಿಮಾಗೆ ನಿಮ್ಮ ತಂದೆ ವಿಜಯ್ ಕೊಟ್ಟ ದೊಡ್ಡ ಗಿಫ್ಟ್ ಏನು?” ಎಂದು ಕೇಳಿದ್ರು. ಅದಕ್ಕೆ ಜೇಸನ್ ಉತ್ತರ ಕೊಡೋಕೆ ಶುರು ಮಾಡುತ್ತಿದ್ದಂತೆಯೇ, ಅಲ್ಲಿದ್ದ ಫ್ಯಾನ್ಸ್ ಜೋರಾಗಿ ಕೂಗಿ, ವಿಸಿಲ್ ಹೊಡೆದು ತಮ್ಮ ಪ್ರೀತಿ ತೋರ್ಪಡಿಸಿದ್ರು. ತಕ್ಷಣ ನಕ್ಕ ಜೇಸನ್, ಅಭಿಮಾನಿಗಳ ಕಡೆ ಕೈ ತೋರಿಸಿ, “ನಮ್ಮ ಅಪ್ಪ ನನಗೆ ಕೊಟ್ಟಿರೋ ಅತಿ ದೊಡ್ಡ ಗಿಫ್ಟ್ ಅಂದ್ರೆ ಈ ಕೋಟ್ಯಂತರ ಅಭಿಮಾನಿಗಳೇ, ಬೇರೆ ಇನ್ನೇನೂ ಅಲ್ಲ” ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ತಮ್ಮ ತಂದೆ ಈ ಸಿನಿಮಾವನ್ನು ಪ್ರಮೋಟ್ ಮಾಡುವುದಿಲ್ಲ ಎಂದು ಜೇಸನ್ ಸ್ಪಷ್ಟವಾಗಿ ತಿಳಿಸಿದ್ದಾರೆ. “ನಮ್ಮ ತಂದೆ ‘ಸಿಗ್ಮಾ’ ರಿಲೀಸ್‌ಗಾಗಿ ಕಾಯುತ್ತಿದ್ದಾರೆ, ಆದರೆ ಅವರು ಈ ಚಿತ್ರದ ಪ್ರಮೋಷನ್‌ಗೆ ಬರೋದಿಲ್ಲ. ಈ ಪ್ರಮೋಷನ್ ಬರೀ ಸಿನಿಮಾ ಮತ್ತು ಅದರ ತಂಡಕ್ಕೆ ಸಂಬಂಧಿಸಿದ್ದು, ಅವರ ಹೆಸರು ಮಧ್ಯೆ ಬರಬಾರದು. ತಂದೆಯ ಇಮೇಜ್ ಸಿನಿಮಾದ ಮೇಲೆ ಓವರ್‌ಲ್ಯಾಪ್ ಆಗೋದು ನನಗಿಷ್ಟವಿಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ.
ತಂದೆಯ ಹೆಸರನ್ನಷ್ಟೇ ನಂಬಿ ಬರದೇ, ಸ್ವಂತ ಕಷ್ಟಪಟ್ಟು ತನ್ನದೇ ಆದ ಗುರುತು ಕಂಡುಕೊಳ್ಳಲು ಹೊರಟಿರೋ ಜೇಸನ್ ಮಾತುಗಳಿಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಜೊತೆಗೆ ‘ಸಿಗ್ಮಾ’ ರಿಲೀಸ್ ಆದ ನಂತರ ನಟನೆಯಲ್ಲಿಯೂ ಮುಂದುವರೆಯುವ ಯೋಚನೆ ಇದೆ ಎಂದು ಸುಳಿವು ನೀಡಿದ್ದಾರೆ.



