ವಿಜಯಪುರ: ಈಜಲು ಹೋಗಿ ಕಾಲುವೆ ನೀರಲ್ಲಿ ಮುಳುಗಿದ್ದ ಯುವಕನ ಶವ ಪತ್ತೆ

ದಿಗಂತ ವರದಿ ಮುದ್ದೇಬಿಹಾಳ: ಕಾಲುವೆಯಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿದ್ದ ಯುವಕನ ಶವ ಪತ್ತೆಯಾಗಿರುವ ಘಟನೆ ಪಟ್ಟಣದ ಹಡಲಗೇರಿ ರಸ್ತೆಯ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಬಳಿ ನಡೆದಿದೆ.

ಮುದ್ದೇಬಿಹಾಳ ತಾಲೂಕು ಗೂಡಿಹಾಳದ ಮದನ್ ಹಣಮಂತ ಗೂಡಿಹಾಳ (17) ಮೃತಪಟ್ಟ ಪಿಯುಸಿ ವಿದ್ಯಾರ್ಥಿ.

ಮದನ್ ಗೂಡಿಹಾಳ ಈತ ಪಟ್ಟಣದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲಿನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದ. ಸೋಮವಾರ ಸಹಪಾಠಿಗಳೊಂದಿಗೆ ಕಾಲುವಿಗೆ ಈಜಲು ಹೋಗಿದ್ದ ವೇಳೆ ನೀರಲ್ಲಿ ಮುಳುಗಿದ್ದ, ಕತ್ತಲೆಯಾಗುವವರೆಗೂ ವಿದ್ಯಾರ್ಥಿಯ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ. ಇಂದು ಶವ ಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಶವವನ್ನು ನೀರಿಂದ ಹೊರ ತೆಗೆದಿದ್ದಾರೆ.

ಶಾಸಕರಿಂದ 50,000 ನೆರವು: ಘಟನೆಯ ಮಾಹಿತಿ ತಿಳಿದ ಶಾಸಕರು ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿಯವರು ಘಟನಾ ಸ್ಥಳಕ್ಕೆ ಆಗಮಿಸಿ, ಮೃತನ ಪೋಷಕರು, ಬಂಧುಗಳಿಗೆ ಸಾಂತ್ವನ ಹೇಳಿದರು. ದುಃಖತಪ್ತ ಪೋಷಕರನ್ನು ತಮ್ಮ ದಾಸೋಹ ನಿಲಯಕ್ಕೆ ಕರೆಸಿಕೊಂಡು, ಸ್ಥಳದಲ್ಲೆ ವೈಯಕ್ತಿಕವಾಗಿ 50,000 ರೂ. ಆರ್ಥಿಕ ನೆರವು ನೀಡಿದರು.
ಮೃತ ವಿದ್ಯಾರ್ಥಿ ಪರಿಶಿಷ್ಟ ಜಾತಿಗೆ ಸೇರಿದ್ದು, ಸರ್ಕಾರದಿಂದ ಮತ್ತು ಶಿಕ್ಷಣ ಇಲಾಖೆಯಿಂದ ಲಭ್ಯವಿರುವ ಎಲ್ಲ ನೆರವನ್ನು ಕೊಡಿಸುವ ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!