ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ನಾನು ಜೋಡೆತ್ತುಗಳಾಗಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ನಾವು ಕೆಲಸ ಮಾಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಹೇಳಿದ್ದಾರೆ.
ಇಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಆರ್.ಅಶೋಕ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಬಳಿಕ ಮಾತನಾಡಿದ ಅವರು , ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ಯಾವುದೇ ವಿವಾದ ಇಲ್ಲದ ಆಡಳಿತವನ್ನು ನಾವು ಕೊಡುತ್ತೇವೆ. ವಿಜಯೇಂದ್ರ ಮತ್ತು ನಾನು ಇಬ್ಬರು ಜೋಡೆತ್ತಿನಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ, ಕಾಂಗ್ರೆಸ್ನಲ್ಲಿ ಸಿಎಂ ಹುದ್ದೆಗಾಗಿ ಪೈಪೋಟಿ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ರೈತರ ಕಷ್ಟ ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಕಾಂಗ್ರೆಸ್ ಸರ್ಕಾರ ರೈತರಿಗೆ ನಯಾ ಪೈಸೆ ಪರಿಹಾರ ಕೊಟ್ಟಿಲ್ಲ. ಕಾಂಗ್ರೆಸ್ ಕೇವಲ ದ್ವೇಷ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ದುರಾಡಳಿತವನ್ನು ಜನರ ಮುಂದೆ ಇಡಲು ಪ್ರಯತ್ನ ಮಾಡುತ್ತೇವೆ ಎಂದರು.
ನನ್ನನ್ನು ವಿಪಕ್ಷ ನಾಯಕನಾಗಿ ಆಯ್ಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಧನ್ಯವಾದ ಹೇಳುತ್ತೇನೆ. ರಾಜ್ಯಾಧ್ಯಕ್ಷ ವಿಜಯೇಂದ್ರ, ನಮ್ಮ ಶಾಸಕರಿಗೂ ಧನ್ಯವಾದ ಹೇಳುತ್ತೇನೆ. ತುರ್ತುಪರಿಸ್ಥಿತಿ ವೇಳೆ ಹೋರಾಟ ಮಾಡಿ 1 ತಿಂಗಳು ಜೈಲಿಗೆ ಹೋಗಿದ್ದೆ. 20 ವರ್ಷಗಳ ಕಾಲ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ಎಲ್ಲವನ್ನೂ ಪರಿಗಣನೆ ಮಾಡಿ ನನಗೆ ವಿಪಕ್ಷ ನಾಯಕ ಸ್ಥಾನ ನೀಡಿದ್ದಾರೆ.
ಉತ್ತರಹಳ್ಳಿ, ಪದ್ಮನಾಭನಗರ ಕ್ಷೇತ್ರದ ಜನ 7 ಬಾರಿ ಆಯ್ಕೆ ಮಾಡಿದ್ದಾರೆ. ಒಂದೇ ಪಕ್ಷ, ಒಂದೇ ಚಿಹ್ನೆ, ಒಂದೇ ಸಿದ್ಧಾಂತದಡಿ 7 ಬಾರಿ ಗೆದ್ದಿದ್ದೇನೆ. ಆರಂಭದಿಂದಲೂ ಸಂಘ ಪರಿವಾರದಲ್ಲಿ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.