Tuesday, February 27, 2024

ವಿಕ್ರಮ 75: ರಾಷ್ಟ್ರಪ್ರಜ್ಞೆಯನ್ನು ವಿವರಿಸಿದ ನಿರ್ಮಲಾನಂದನಾಥಶ್ರೀಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: 

“ಭಾರತದಲ್ಲಿ ಅರವಿಂದ ಘೋಷರಾದಿಯಾಗಿ ಹಲವು ಮಹನೀಯರು ಈ ಹಿಂದೆ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸಿರುವುದನ್ನು ನೋಡಿದ್ದೇವೆ. ಆದರೆ ನಮ್ಮ ಸಮಾಜ ಸಮಸ್ಯೆಯೊಂದನ್ನು ಪರಿಹರಿಸಿಕೊಂಡ ನಂತರ ಮತ್ತೆ ಸುಖಮರೆವಿಗೆ ಜಾರಿಬಿಡುತ್ತದೆ. ಇದಾಗದಂತೆ ನಿರಂತರ ಜಾಗೃತಿ ಮಾಡಿಕೊಂಡು ಬರುವುದಕ್ಕೆ ವಿಕ್ರಮದಂಥ ಪತ್ರಿಕೆಗಳು ಬೇಕಾಗುತ್ತವೆ” – ವಿಕ್ರಮ ವಾರಪತ್ರಿಕೆಯು ಸಾರ್ಥಕ 75 ವರ್ಷಗಳನ್ನು ಮುಗಿಸಿದ ಹೊತ್ತಿನಲ್ಲಿ ಬೆಂಗಳೂರಿನ ಆರ್ ವಿ ಟೀಚರ್ಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥಸ್ವಾಮೀಜಿಗಳು ಹೇಳಿರುವ ಮಾತುಗಳಿವು.

ವಿಕ್ರಮವು ನೂರು ವಸಂತಗಳನ್ನೂ ದಾಟಿ ಮುನ್ನಡೆಯಲಿ ಎಂಬ ಆಶೀರ್ವಚನ ನೀಡುತ್ತ ಅವರು ಹರಿಸಿದ ಚಿಂತನೆಯ ಪ್ರಮುಖ ಬಿಂದುಗಳು ಹೀಗಿವೆ.

  • ರಾಷ್ಟ್ರಪ್ರಜ್ಞೆ ಎಂಬುದು ನಿಜಕ್ಕೂ ಬೇಕಾ ಎಂಬ ಪ್ರಶ್ನೆಯನ್ನು ಕೇಳುವವರೂ ಇದ್ದಾರೆ. ನಿಜಾರ್ಥದಲ್ಲಿ ಈ ಅನ್ನಮಯಕೋಶವನ್ನು ಮೀರಿ ಗಡಿಗಳು ಅಪ್ರಸ್ತುತ ಎನ್ನುವ ಸ್ಥಿತಿ ಬರುವುದಕ್ಕೆ ಜ್ಞಾನಿಗಳಾಗಬೇಕಾಗುತ್ತದೆ. ಅದು ಎಲ್ಲರಿಗೂ ಆಗುವುದಿಲ್ಲ.ಹೀಗಾಗಿ ಸಾಮಾನ್ಯರಿಗೆ ದೇಶಪ್ರಜ್ಞೆ ಬೇಕೇಬೇಕು. ಸ್ವಾತಂತ್ರ್ಯಪೂರ್ವದಲ್ಲಿ ಈ ಪ್ರಜ್ಞೆ ಜಾಗೃತವಾಯಿತು. ಅದು ಮರೆವಿಗೆ ಸರಿಯದೇ, ಮತ್ತೆ ದಾಸ್ಯದತ್ತ ಹೋಗದೇ ಇರುವುದಕ್ಕೆ ನಿರಂತರ ಜಾಗೃತಿ ಅಗತ್ಯ. ವಿಕ್ರಮ ವಾರಪತ್ರಿಕೆ ಆ ಕೆಲಸವನ್ನು ಮಾಡುತ್ತ ಬಂದಿದೆ.
  • ವಿಕ್ರಮಕ್ಕೆ 25 ವರ್ಷಗಳು ತುಂಬಿದಾಗ ಕುವೆಂಪು ಅವರು ಪತ್ರಿಕೆಗಾಗಿ ನೀಡಿದ್ದ ಸಂದೇಶವನ್ನು ನೆನಪಿಸಿಕೊಳ್ಳುವ ಕಾರ್ಯವಾಗಿದೆ. ಹಿಂದು ಎಂದರೆ ಉಪನಿಷತ್ತುಗಳ ಮಾರ್ಗದಲ್ಲಿ ನಡೆಯಬೇಕಿರುವ ಸಮೂಹ ಎಂಬ ಭಾವ ಕುವೆಂಪು ಅವರ ಮಾತುಗಳಲ್ಲಿತ್ತು. ಅದೇ ಆಶಯದಲ್ಲಿ ವಿಕ್ರಮ ಮುನ್ನಡೆಯುತ್ತಿದೆ. ವಿವೇಕಾನಂದರು ಸಹ, ಭಾರತ ಅಳಿದರೆ ಯಾರು ಉಳಿಯುತ್ತಾರೆ ಎಂದು ವಿಮರ್ಶಿಸುತ್ತ ಹೇಳಿದ್ದರು- ವಿಜ್ಞಾನ-ತಂತ್ರಜ್ಞಾನಗಳನ್ನು ಕಳೆದುಕೊಂಡಾಗ ಅಮೆರಿಕ ಅಳಿಯುತ್ತದೆ, ವ್ಯಾಪಾರ ಕಳೆದುಕೊಂಡರೆ ಇಂಗ್ಲೆಂಡ್ ಅಳಿಯುತ್ತದೆ, ಆದರೆ ಭಾರತ ನಾಶವಾಗುವುದೆಂದರೆ ಅದರರ್ಥ ಜ್ಞಾನ ಪರಂಪರೆಯೊಂದು ಇಲ್ಲವಾಗುವುದು ಅಂತ.
  • ಈಗಿನ ಮಕ್ಕಳು ದೇಶದ ಬಗ್ಗೆ ತಿಳಿಯುವಂತಾಗಬೇಕು. ದೇಶವೆಂದರೆ ಕೇವಲ ಭೂಗೋಳವಲ್ಲ, ಇಲ್ಲಿನ ಜ್ಞಾನ. ನಮ್ಮ ಬಗ್ಗೆಯೇ ನಮಗೆ ಗೌರವವಿಲ್ಲದಿದ್ದರೆ ಜಗತ್ತಿಗೆ ಏನು ಕೊಡುವುದಕ್ಕೆ ಸಾಧ್ಯ? ಹಿಂದುಗಳು ಸಾಮಾನ್ಯವಾಗಿ ರಾಮಾಯಣ-ಮಹಾಭಾರತಗಳನ್ನು ತಿಳಿದುಕೊಂಡಿರುತ್ತಾರೆ. ಅದರಾಚೆಗೆ ಉಪನಿಷತ್ತಿನ ವ್ಯಾಪ್ತಿಯನ್ನು ಬೆಳೆಸಿಕೊಳ್ಳಬೇಕು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಿಥಿಕ್ ಸೊಸೈಟಿ ಗೌರವಾಧ್ಯಕ್ಷ ವಿ ನಾಗರಾಜ್ ವೇದಿಕೆಯಲ್ಲಿದ್ದರು. ವಿಕ್ರಮ ಸಂಪಾದಕ ರಮೇಶ ದೊಡ್ಡಪುರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಆರೆಸ್ಸೆಸ್ ಸಹಸರಕಾರ್ಯವಾಹ ಮುಕುಂದ ಸಿ ಆರ್, ಕ್ಷೇತ್ರೀಯ ಪ್ರಚಾರಕರಾದ ಸುಧೀರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!