ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಆಕ್ಟಿಂಗ್‌ನಿಂದ ಜನರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಖ್ಯಾತ ಖಳನಟ ಪ್ರದೀಪ್ ರಾವತ್ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ.
ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 74 ವರ್ಷದ ಪ್ರದೀಪ್ ರಾವತ್ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸೌಮ್ಯ ಸ್ವಭಾವದವರಾಗಿದ್ದ ರಾವತ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಎಲ್ಲ ಭಾಷೆಗಳಲ್ಲಿ ನಟನೆ
ರಾವತ್ ಬರೀ ಬಾಲಿವುಡ್‌ಗೆ ಸೀಮಿತವಾಗಿರಲಿಲ್ಲ. ಕನ್ನಡ, ತಮಿಳು, ತೆಲುಗು,ಬೆಂಗಾಲಿ, ಮರಾಠಿ, ಭೋಜ್ಪುರಿ, ನೇಪಾಳಿ ಚಿತ್ರರಂಗದಲ್ಲಿಯೂ ಆಕ್ಟೀವ್ ಆಗಿದ್ದರು. ಭಾರತೀಯ ಚಿತ್ರರಂಗದಲ್ಲೇ ವಿಭಿನ್ನ ಛಾಪು ಮೂಡಿಸಿದ್ದ ರಾವತ್, ಸ್ಕ್ರೀನ್ ಮೇಲೆ ಬರುತ್ತಿದ್ದಂತೆಯೇ ಪ್ರೇಕ್ಷಕನೆದೆಯಲ್ಲಿ ನಡುಕ ಹುಟ್ಟುತ್ತಿತ್ತು.
ಮಹಾರಾಭಾರತದ ಅಶ್ವತ್ಥಾಮ
ರಾವತ್ ಅವರು ಬಿ.ಆರ್. ಚೋಪ್ರಾರ ಜನಪ್ರಿಯ ಮಹಾಭಾರತ ಧಾರಾವಾಹಿಯಲ್ಲಿ ಅಶ್ವತ್ಥಾಮನ ಪಾತ್ರ ನಿಭಾಯಿಸಿದ್ದರು. ಈ ಪಾತ್ರದ ಮೂಲಕ ರಾವತ್ ಮನೆಮಾತಾಗಿದ್ದರು. ಜನರು ಎಲ್ಲೆಡೆ ಇವರನ್ನು ನೋಟಿಸ್ ಮಾಡಲು ಆರಂಭಿಸಿದ್ದರು. ಅದಾದ ನಂತರ ಅವರಿಗೆ ಘಜಿನಿ ಸಿನಿಮಾದ ಧರ್ಮಾತ್ಮ ಪಾತ್ರ ಸಿಕ್ಕಿತ್ತು. ಆಮಿರ್ ಖಾನ್ ಅಭಿನಯದ ‘ಲಗಾನ್’ ಸಿನಿಮಾದಲ್ಲಿ ದೇವ ಎಂಬ ಸಿಖ್ ಯೋಧನ ಪಾತ್ರದಲ್ಲಿ ಪ್ರದೀಪ್ ರಾವತ್ ಅವರು ನಟಿಸಿ ಮೆಚ್ಚುಗೆ ಗಳಿಸಿದ್ದರು. ಎಸ್.ಎಸ್. ರಾಜಮೌಳಿ ನಿರ್ದೇಶನದ ತೆಲುಗಿನ ‘ಸೈ’ ಚಿತ್ರದ ಭಿಕ್ಷು ಯಾದವ್ ಪಾತ್ರಕ್ಕೆ ಫಿಲ್ಮ್‌ಫೇರ್ ಅತ್ಯುತ್ತಮ ಖಳನಟ ಪ್ರಶಸ್ತಿಯನ್ನೂ ಪಡೆದಿದ್ದರು.
ಕನ್ನಡ ಸಿನಿಮಾಗಳು
ರಾವತ್ ಕನ್ನಡ ಚಿತ್ರರಂಗದಲ್ಲಿಯೂ ಅದ್ಭುತ ವಿಲನ್ ಪಾತ್ರಧಾರಿ ಎಂದು ಅನಿಸಿಕೊಂಡಿದ್ದರು. ಪರೋಡಿ, ಗಜ, ಅಭಯ್, ಬಚ್ಚನ್ ಸೇರಿದಂತೆ ಇತರ ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದಾರೆ.



